ಬೆಣಕಲ್ ಗ್ರಾ. ಪಂ. ವ್ಯಾಪ್ತಿಯ ಕಸ ವಿಲೇವಾರಿ ಯೋಜನಾ ಕಾಮಗಾರಿ ಪರಿಶೀಲಿಸಿದ ಸಿಇಒ

ಕುಕನೂರು: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣೀತ್ ನೇಗಿ ಅವರು ಮಂಗಳವಾರ ತಾಲೂಕಿನ ಬೆಣಕಲ್ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕಸ ವಿಲೇವಾರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಲ್ಲಿ ಆಡಳಿತಾತ್ಮಕ ಕಾರ್ಯಗಳ ಪರಿಶೀಲನೆ ನಡೆಸಿದ ಅವರು, ಎಲ್ಲಾ ಸಿಬ್ಬಂದಿಗಳು ಶೇಕಡಾ 100 ರಷ್ಟು ಇ-ಹಾಜರಾತಿ ಕಡ್ಡಾಯವಾಗಿ ದಾಖಲಿಸಬೇಕು. ಗ್ರಾಮ ಪಂಚಾಯತಿ ಹಂತದಲ್ಲಿನ ಎಲ್ಲಾ ಕಾರ್ಯಗಳು ಸ್ಥಳದಲ್ಲೇ ಪರಿಣಾಮಕಾರಿಯಾಗಿ ನಡೆಯುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸ್ವಚ್ಛ ವಾಹಿನಿ ಯೋಜನೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಚಾಲಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ನಂತರ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಯೋಜನಾ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಸಿಇಒ, ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಾರುತಿ ಗೊಂಡಬಾಳ, ಸಿಬ್ಬಂದಿಗಳಾದ ಭೀಮಪ್ಪ, ಚಂದ್ರಶೇಖರ್, ವಿ.ಆರ್.ಡಿ.ಬ್ಲ್ಯೂ ಕನಕಪ್ಪ ವಜ್ರಬಂಡಿ ಹಾಗೂ ಎಂ.ಬಿ.ಕೆ. ಸುನಿತಾ ಅವರು ಉಪಸ್ಥಿತರಿದ್ದರು.







