Koppal | ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮೇಲೆ ಕುರ್ಚಿ ಎಸೆಯಲು ಯತ್ನ

ಕೊಪ್ಪಳ: ಸಂಸದ ಕೆ. ರಾಜಶೇಖರ್ ಹಿಟ್ನಾಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮೇಲೆ ಕುರ್ಚಿ ಎಸೆಯಲು ಯತ್ನಿಸಿದ ಘಟನೆ ತಾಲ್ಲೂಕಿನ ಹಿಟ್ನಾಳ ಗ್ರಾಮದಲ್ಲಿ ನಡೆದಿದೆ.
ಹಿಟ್ನಾಳ ಗ್ರಾಮದ ಬಳಿ ನಿರ್ಮಾಣವಾಗಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸೋಮಣ್ಣ ಅವರ ಕಡೆ ಕುರ್ಚಿ ಎಸೆಯಲಾಗಿತ್ತು. ಆದರೆ ಅಂಗರಕ್ಷಕರು ಅದನ್ನು ತಡೆದಿದ್ದಾರೆ. ನಂತರ ಕೆಲಕಾಲ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿತ್ತು.
ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು, ಕುರ್ಚಿ ಬಿಸಾಡಿ ನಂತರ ಸೋಮಣ್ಣ ಅವರ ಕಾರಿನ ಮುಂದೆ ಕುಳಿತು ಪ್ರತಿಭಟಿಸಿದರು.
ಹಿಟ್ಬಾಳ, ಮುನಿರಾಬಾದ್ ಹಾಗೂ ಗಿಣಗೇರಾ ಸಂಪರ್ಕಿಸುವ ಎಲ್‌ಸಿ ಸಂಖ್ಯೆ 77 ಮಾರ್ಗದ ಬದಲಿಗೆ, 27 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, "ಈ ಕಾಮಗಾರಿಯ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದಾಗಿದೆ. ಕಾರ್ಯಕ್ರಮದ ಸಂಬಂಧ ಯಾವುದೇ ಶಿಷ್ಠಾಚಾರ ಉಲ್ಲಂಘನೆಯಾಗಿಲ್ಲ. ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸಲಾಗಿದೆ" ಎಂದು ಆರೋಪಿಸಿದ್ದಾರೆ.







