ಕೊಪ್ಪಳ | ಜನರ ಕಷ್ಟ ಕೇಳುವವರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು: ನಟ ಚೇತನ್ ಅಹಿಂಸಾ

ಕೊಪ್ಪಳ: ಆಳುವವರು ನೋವಿನಲ್ಲಿರುವ ಜನರ ಕಷ್ಟವನ್ನು ಕೇಳುವಂತಿರಬೇಕು. ಅಂಥವರನ್ನು ನಾವು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಪ್ರಗತಿಪರ ಮುಖಂಡ ಮತ್ತು ನಟ ಚೇತನ್ ಅಹಿಂಸಾ ಹೇಳಿದರು.
ಅವರು ನಗರಸಭೆ ಸಂಕೀರ್ಣದ ಮುಂದೆ ನಡೆಯುತ್ತಿರುವ ಬಲ್ಡೋಟಾ ಹಾಗೂ ಇತರೆ ಕಾರ್ಖಾನೆ ತಡೆ ಹೋರಾಟದ 19ನೇ ದಿನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಜನರಿಗೆ ಮೂಲಭೂತವಾಗಿ ಅವಶ್ಯಕತೆ ಇರುವ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಅದರ ಆಶಯದಂತೆ ನಮಗೆ ನ್ಯಾಯ ಸಿಗಬೇಕು. ಹೋರಾಟ ಎಷ್ಟು ದೊಡ್ಡದು ಎಂಬುದು ಮುಖ್ಯವಲ್ಲ. ಹೋರಾಟದ ವಿಷಯ ಮತ್ತು ಹೋರಾಟ ಮಾಡುವ ಗಟ್ಟಿ ಜನ ಬಹಳ ಮುಖ್ಯ ಎಂದು ಹೇಳಿದರು.
ಜನ ಎದ್ದೇಳಬೇಕು, ಹೋರಾಡಬೇಕು ನಾನು ಕೂಡ ಈ ಹೋರಾಟದಲ್ಲೇ ಮತ್ತೆ ಭಾಗವಹಿಸುತ್ತೇನೆ. ಅಂಬೇಡ್ಕರ್ ಅವರು ಹೇಳಿದಂತೆ ಕೇವಲ ಮತ ಚಲಾಯಿಸುವುದಲ್ಲ, ಅಧಿಕಾರದ ಹಕ್ಕನ್ನು ನಾವು ಪಡೆದುಕೊಳ್ಳಬೇಕು. ಅಂತಹ ಜಾಗೃತಿ ಮೂಡಿಸುವ ಸಲುವಾಗಿ ನಾನು ರಾಜ್ಯಾದ್ಯಂತ ಓಡಾಡಿ ಜನರಿಗೆ ತಮ್ಮ ಹಕ್ಕು ಮತ್ತು ಅಧಿಕಾರದ ಮಾಹಿತಿ ನೀಡುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲೆ ಕಪ್ಪತಗುಡ್ಡದ ನಂದಿವೇರಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಮಾತನಾಡಿ, ಸ್ವಾಮಿಗಳು ಕೇವಲ ಮಠದಲ್ಲಿ ಕೂರುವುದಲ್ಲ, ಅವರು ಜನರ ನೋವಿಗೆ ಸ್ಪಂದಿಸುವ ಅಗತ್ಯ ಇದೆ. ನಾವು ಯಾರ ವಿರೋಧಿಗಳಲ್ಲ, ಸರಕಾರದ ಮೇಲೆ ನಮಗೆ ಯಾವುದೇ ಹಗೆತನ ಇಲ್ಲ. ಆದರೆ ಜನರಿಗೆ ಸಂಕಷ್ಟ ಬಂದಾಗ ಸರಕಾರಗಳು ಸ್ಪಂದಿಸಬೇಕು ಎಂದು ಹೇಳಿದರು.
ಮನುಷ್ಯರು ವಾಸಿಸುವ ಜಾಗದಲ್ಲಿ ಕಾರ್ಖಾನೆಗಳಿಗೆ ಅವಕಾಶ ಕೊಡಬಾರದು ಎಂಬುದು ನಮ್ಮ ಅಭಿಪ್ರಾಯ. ರಾಜ್ಯದಲ್ಲೇ ಅತ್ಯುತ್ತಮ ಗಾಳಿ ಕಪ್ಪತಗುಡ್ಡದಲ್ಲಿದೆ. ಅಲ್ಲಿ ಲಕ್ಷ ಲಕ್ಷ ಅತ್ಯದ್ಭುತವಾದ ಸಸ್ಯಕಾಶಿ ಇದೆ. ಇಲ್ಲಿನ ಜನರಿಗೆ ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಪರಿಸರ ಮೂಲಭೂತ ಹಕ್ಕು ಕೊಡಿಸುವ ಸಲುವಾಗಿ ನಿರಂತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಈ ವೇಳೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ರಾಜೂರು, ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ಕರಿಯಪ್ಪ ಗುಡಿಮನಿ, ವಿದ್ಯಾ ನಾಲವಾಡ, ರತ್ನಮ್ಮ ಡಿ. ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಎಸ್. ಎ. ಗಫಾರ್, ಶಂಭುಲಿಂಗಪ್ಪ ಹರಗೇರಿ, ಡಿ.ಎಂ.ಬಡಿಗೇರ, ಮುದಕಪ್ಪ ಹೂಸಮನಿ, ಶರಣು ಪಾಟೀಲ್, ಮಖಬೂಲ್ ರಾಯಚೂರು, ಕಾಶಪ್ಪ ಛಲವಾದಿ, ರಾಜು ಸಸಿಮಠ, ಗವಿಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.







