ಕನಕಗಿರಿ ಪತ್ರಕರ್ತರ ಮೇಲಿನ ಹಲ್ಲೆ ಖಂಡನೆ : ಕ್ರಮಕ್ಕೆ ಆಗ್ರಹಿಸಿ ಮನವಿ

ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಆಹಾರ ಇಲಾಖೆ ಶಿರಸ್ತೇದಾರ ಮಲ್ಲಿಕಾರ್ಜುನ ಶಾಸ್ತ್ರಿಮಠ ಅವರ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಮಲ್ಲು ಮಾಟರಂಗಿ ಮಾತನಾಡಿ, ಮಾರ್ಚ್ 2ರಂದು ಸಂಜೆ 7 ಗಂಟೆ ಸುಮಾರಿಗೆ ಕನಕಗಿರಿ ಪಟ್ಟಣ ಪಂಚಾಯಿತಿ ಸಮೀಪದ ಮೆಡಿಕಲ್ ಸ್ಟೋರ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ಪಪಂ ಸದಸ್ಯ ಅನಿಲಕುಮಾರ ಬಿಜ್ಜಳ ಹಾಗೂ ಪಪಂ ಅಧ್ಯಕ್ಷೆಯ ಪತಿ ಟಿ.ಜೆ. ರಾಮಚಂದ್ರ ಮತ್ತು ಕೆಲವರ ನಡುವೆ ವಾಗ್ವಾದ ಉಂಟಾಗಿ ಹಲ್ಲೆಗೆ ಯತ್ನಿಸಿದ ಮಾಹಿತಿ ಬಂದಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಘಟನೆ ಸ್ಥಳಕ್ಕೆ ತೆರಳಿದ ಕನಕಗಿರಿ ತಾಲೂಕಿನ ಪತ್ರಕರ್ತರಾದ ಮಧುಸೂದನ್, ಪ್ರಹ್ಲಾದ್ ರೆಡ್ಡಿ, ಶ್ರೀನಿವಾಸ ಪೂಜಾರ್ ಸೇರಿದಂತೆ ಇತರರು ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಮುಂದಾದಾಗ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ನೂರಾರು ಜನರ ಗುಂಪು ಮಾಧ್ಯಮ ಕ್ಷೇತ್ರವನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ಆತಂಕಕಾರಿ ವಿಷಯವಾಗಿದ್ದು, ಇದರಿಂದ ಪತ್ರಕರ್ತರು ಭಯದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಗೌರವ ಅಧ್ಯಕ್ಷ ಇಮಾಮಸಾಬ ಸಂಕನೂರು ಮಾತನಾಡಿ, ಘಟನಾ ಸ್ಥಳದಲ್ಲಿ ಪೊಲೀಸರು ಇದ್ದರೂ ಸಹ ಪತ್ರಕರ್ತರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ನಡೆದಿರುವುದು ಖಂಡನೀಯ. ಘಟನೆ ಕುರಿತು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡ್ರಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಮಹಾಂತೇಶ ಛಲವಾದಿ, ಶರಣು ಗುಮಗೇರಿ, ಉಪಾಧ್ಯಕ್ಷ ಚಂದ್ರಶೇಖರ ಮರದಡ್ಡಿ, ಖಜಾಂಚಿ ದೊಡ್ಡಬಸಪ್ಪ ಹಕಾರಿ, ಸಹಕಾರ್ಯದರ್ಶಿ ಅನಿಲಕುಮಾರ ಕಲಭಾವಿ, ಕಾರ್ಯಕಾರಣಿ ಸದಸ್ಯರಾದ ಉಮಾಶಂಕರ ಹಿರೇಮಠ, ಫಾಲಾಕ್ಷಪ್ಪ ತಿಪ್ಪಳ್ಳಿ, ಶಿವಪುತ್ರಯ್ಯ ಹಿತ್ತಲಮನಿ, ಬಾಳನಗೌಡ ಪಾಟೀಲ, ಇದ್ದರು







