ಬಿಜೆಪಿ ಸರ್ಕಾರ ಮಾಡಿದ ಸಾಲ ಕಾಂಗ್ರೆಸ್ ಸರ್ಕಾರ ಕಟ್ಟುತ್ತಿದೆ: ಶಾಸಕ ಬಸವರಾಜ್ ರಾಯರಡ್ಡಿ

ಕೊಪ್ಪಳ/ ಕುಕನೂರು : ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಉದ್ರಿ ಸಾಲದ ಹಣವನ್ನು ನಮ್ಮ ಕಾಂಗ್ರೆಸ್ ಸರ್ಕಾರ ಚುಕ್ತಾ ಮಾಡುತ್ತಿದೆ. ಬಿಜೆಪಿ ಸರ್ಕಾರ ಅನೇಕ ಇಲಾಖೆಯ ಬಿಲ್ಲುಗಳನ್ನು ಪಾವತಿ ಮಾಡದೇ ಹಾಗೆಯೇ ಬಿಟ್ಟು ಹೋಗಿದ್ದು ಅದೆಲ್ಲ ಸಾಲವನ್ನು ತೀರಿಸುವ ಹೊರೆ ನಮ್ಮ ಸರ್ಕಾರದ ಮೇಲೆ ಬಿದ್ದಿದೆ ಎಂದು ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಹೇಳಿದ್ದಾರೆ.
ಕುಕನೂರು ತಾಲೂಕಿನ ನೆಲಜೇರಿ, ಮಂಗಳೂರು, ರಾವಣಕಿ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯಲ್ಲಿ 30 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ, ಹೌಸಿಂಗ್ ನಲ್ಲಿ 12 ಸಾವಿರ ಕೋಟಿ ರೂ ಸೇರಿದಂತೆ ಹಲವು ಇಲಾಖೆಯ ಬಾಕಿ ಬಿಲ್ಲುಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ಭರಿಸುತ್ತಿದೆ, ನಮಗೆ ಇದೊಂದು ದೊಡ್ಡ ಭಾರವೇ ಆಗಿದೆ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ರೀತಿಯ ಹಣದ ಕೊರತೆ ಇಲ್ಲವೇ ಇಲ್ಲ, ವಾರ್ಷಿಕ 52 ಸಾವಿರ ಕೋಟಿ ರೂ ಸೇರಿದಂತೆ ಸಾಮಾಜಿಕ ಭದ್ರತೆ ಯೋಜನೆ ಒಳಗೊಂಡು ಒಟ್ಟು 1 ಲಕ್ಷ 2 ಸಾವಿರ ಕೋಟಿ ರೂ ನೇರವಾಗಿ ವಾಪಲಾನುಭವಿಗಳಿಗೆ ಜಮೆ ಆಗುತ್ತಿದೆ, ಇಷ್ಟೆಲ್ಲಾ ಸಾಮಾನ್ಯ ಕೆಲಸವಲ್ಲ, ಇದರೊಟ್ಟಿಗೆ ರಾಜ್ಯದ ಪ್ರತೀ ಕ್ಷೇತ್ರದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊಡಲಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ಆರ್ಥಿಕ ಸ್ಥಿರ, ಶಭದ್ರತೆ ಕಾಯ್ದುಕೊಂಡಿದೆ ಎಂದು ಶಾಸಕ ರಾಯರಡ್ಡಿ ಹೇಳಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಸುನಾಮಿಯೇ ನಡೆದಿದೆ. ಇನ್ನೂ 3 ವರ್ಷಗಳ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುತ್ತದೆ.
ಬಿನ್ನಾಳ ಮತ್ತು ಗುನ್ನಾಳ ಗ್ರಾಮಗಳಿಗೆ 2 ನೂತನ ಕೆ ಪಿ ಎಸ್ ಸ್ಕೂಲ್ ಮಂಜೂರಾಗಿವೆ, ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಇನ್ನೂ ನಾಲ್ಕು ಕೆ ಪಿ ಎಸ್ ಸ್ಕೂಲ್ ಪ್ರಾರಂಭಿಸಲಾಗುವುದು. ಅಲ್ಲದೇ ಕಾರ್ಮಿಕ ವರ್ಗದ ಮಕ್ಕಳಿಗೆ ನೂತನವಾಗಿ ವಸತಿ ಶಾಲೆಗೆ ಮಂಜೂರಾತಿ ಸಿಕ್ಕಿದ್ದು ಶೀಘ್ರದಲ್ಲಿ ಪ್ರಾರಂಭ ಮಾಡಲಾಗುತ್ತದೆ. ಮುಂದಿನ ತಿಂಗಳ ಒಳಗೆ 24 ಕೆರೆ ತುಂಬಿಸುವ ಕಾರ್ಯ ಮುಗಿಯುತ್ತದೆ. ಅಲ್ಲದೇ ಮತ್ತೆ ಹೊಸದಾಗಿ 32 ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ರೈತರು ಜಮೀನು ಕೊಟ್ಟು ಸಹಕರಿಸಿ ಎಂದು ಶಾಸಕ ರಾಯರಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಚ್ ಪ್ರಾಣೇಶ್, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್, ಕಾಂಗ್ರೆಸ್ ಮುಖಂಡರಾದ ಹನುಮಂತಗೌಡ ಚೆಂಡೂರು, ಕೆರಿಬಸಪ್ಪ ನಿಡಗುಂದಿ, ರಾಘವೇಂದ್ರ ಜೋಶಿ, ಶರಣಪ್ಪ ಗಾಂಜಿ, ಶಿವನಗೌಡ ದಾನರಡ್ಡಿ, ಅಶೋಕ್ ತೋಟದ್, ಪರೀದಾ ಬೇಗಂ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಇತರರು ಉಪಸ್ಥಿತರಿದ್ದರು.