ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಕೊಪ್ಪಳದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಕೊಪ್ಪಳ: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದ ಅಶೋಕ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಕೋಟ್ಯಂತರ ಅರ್ಹ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಈ ಅಕ್ರಮಗಳಿಗೆ ನೇರ ಹೊಣೆಗಾರರಾಗಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ದೇಶದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ಸುಮಾರು 13.50 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇವರಲ್ಲಿ ಬಹುತೇಕರು ಈಗಲೂ ಮತದಾನದ ಅರ್ಹತೆ ಹೊಂದಿರುವ ಸಕ್ರಿಯ ನಾಗರಿಕರಾಗಿದ್ದಾರೆ. ಅರ್ಹ ಮತದಾರರಿಗೆ ಅವರ ಹಕ್ಕನ್ನು ತಕ್ಷಣ ಮರಳಿಸಬೇಕು. ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಸಾಧ್ಯವಾಗದಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಎಸ್‌ಐಆರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ಅವರು, ಕೇಂದ್ರಕ್ಕೆ ಯಾವುದೇ ಪ್ರಶ್ನೆ ಕೇಳಿದರೂ ಬಿಜೆಪಿ ಮತ್ತೊಂದು ವಿವಾದವನ್ನು ಮುನ್ನೆಲೆಗೆ ತಂದು ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದರು. 1984ರ ಸಿಖ್ ನರಮೇಧದ ವಿಚಾರವನ್ನು ಪ್ರಸ್ತಾಪಿಸಿ ದೇಶದ ದಿಕ್ಕು ತಪ್ಪಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಹಾಗಾದರೆ ಕಾಂಗ್ರೆಸ್ ಕೂಡ ಗುಜರಾತ್ ನರಮೇಧದ ವಿಚಾರವನ್ನು ಪ್ರಸ್ತಾಪಿಸಬಹುದು. ಆ ಪ್ರಕರಣದಲ್ಲಿ ಮೋದಿ ಅಪರಾಧಿ ಎಂದು ಬಿಂಬಿಸಲಾಗಿತ್ತು ಎಂದು ಅವರು ಹೇಳಿದರು. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಮಹತ್ವದ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿರುವುದರ ಹಿಂದಿನ ಉದ್ದೇಶದ ಬಗ್ಗೆ ಜನರಲ್ಲಿ ಅನುಮಾನಗಳಿವೆ ಎಂದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಅಧಿಕಾರ ಹಿಡಿಯಲು ಅಡ್ಡದಾರಿ ತುಳಿದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಿ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಎಂ. ಇಟ್ಟಂಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ನಗರ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ, ಹನುಮಂತಗೌಡ ಚಂಡೂರ್, ಮುಖಂಡರಾದ ಯಂಕಣ್ಣ ಯರಾಶಿ, ಮುತ್ತುರಾಜ ಕುಷ್ಟಗಿ, ಅಕ್ಬರ್ ಪಾಶಾ, ಸುರೇಶ ದಾಸರಡ್ಡಿ, ಮಾನವಿ ಪಾಶಾ, ಚಿಕನ್ ಪೀರಾ, ಸಲೀಂ ಅಳವಂಡಿ, ಸೈಯದ್ ನಾಸಿರುದ್ದೀನ್, ಕೆ.ಎಂ. ಸೈಯದ್, ಮಲ್ಲಿಕಾರ್ಜುನ ಪೂಜಾರ, ಪದ್ಮಾ ಕಂಬಳಿ, ಲಿಂಗರಾಜ ಕಾಳೆ, ಸೇವಾದಳದ ಸದಸ್ಯರು ಹಾಗೂ ಶ್ರೀನಿವಾಸ ಪಂಡಿತ್ ಸೇರಿದಂತೆ ಹಲವು ಹಿರಿಯ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.






