ಕುಕನೂರು ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ

ಕುಕನೂರು : ಪಟ್ಟಣದ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಕುಕನೂರು ಬಸ್ ನಿಲ್ದಾಣ ಹಾಗೂ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಪೊಲೀಸ್ ಠಾಣೆಯ ಎಎಸ್‌ಐ ನಿಂಗಮ್ಮ ಅವರು ಕರಪತ್ರಗಳನ್ನು ವಿತರಿಸಿ ಸಂಚಾರ ನಿಯಮಗಳು, ತುರ್ತು ಕರೆ ಸಂಖ್ಯೆ 112, ಮಹಿಳಾ ಸಹಾಯವಾಣಿ 181 ಹಾಗೂ ಸೈಬರ್ ವಂಚನೆ ದೂರು ಸಂಖ್ಯೆ 1930 ಕುರಿತು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಅಪರಾಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅವು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ ತಿಂಗಳನ್ನು ಅಪರಾಧ ತಡೆ ಮಾಸಾಚರಣೆಯಾಗಿ ಆಚರಿಸಲಾಗುತ್ತಿದೆ. ಕೇವಲ ಪೊಲೀಸರಿಂದ ಅಪರಾಧ ತಡೆ ಸಾಧ್ಯವಿಲ್ಲ, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಅಪರಾಧಗಳು ನಡೆದ ಬಳಿಕ ತನಿಖೆ ನಡೆಸುವುದಕ್ಕಿಂತ, ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಯಾವುದೇ ಅಪರಾಧವನ್ನು ಕಂಡ ಸಂದರ್ಭಗಳಲ್ಲಿ ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ನೀಡಬೇಕು. ಇಲ್ಲವಾದಲ್ಲಿ ಸಾಕ್ಷ್ಯಾಭಾವದಿಂದ ತಪ್ಪಿತಸ್ಥರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಮನೆಗೆ ಬೀಗ ಹಾಕಿ ಹೊರ ಊರಿಗೆ ತೆರಳುವ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಬೇಕು ಅಥವಾ ಗೃಹ ರಕ್ಷಕ ತಂತ್ರಾಂಶದಲ್ಲಿ ಮನೆ ವಿವರಗಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ವಿನೋದ ಕಾಮನೂರು, ಚಂದ್ರಶೇಖರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.







