ಕೆಪಿಎಸ್ಸಿ ನೇಮಕಾತಿ ಹಗರಣದಲ್ಲಿ 80 ಲಕ್ಷ ರೂ. ಬೇಡಿಕೆ ಇಟ್ಟಿರುವ ದಾಖಲೆಗಳು ನನ್ನ ಬಳಿ ಇವೆ : ಸಿ.ಟಿ.ರವಿ ಆರೋಪ

ಸಿ.ಟಿ.ರವಿ
ಕನಕಗಿರಿ: ಕೆಪಿಎಸ್ಸಿ ನೇಮಕಾತಿ ಹಗರಣದಲ್ಲಿ 80 ಲಕ್ಷ ರೂ. ಬೇಡಿಕೆ ಇಟ್ಟಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಅಧ್ಯಕ್ಷರ ಮಕ್ಕಳು ಕೂಡ ಪರೀಕ್ಷೆ ಬರೆದಿದ್ದಾರೆ. ನೇಮಕಾತಿ ಹಗರಣಕ್ಕೆ ಯಾರು ಹೊಣೆ ಹೊರುತ್ತಾರೆ ಎಂದು ಪ್ರಶ್ನಿಸಿದರು.
ತಮ್ಮ ‘ಮುಲ್ಲಾ’ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ಸಿ.ಟಿ. ರವಿ, “ನಾನು ‘ಮುಲ್ಲಾ’ ಎಂದಿದ್ದೇನೆ ಹೊರತು ‘ಮುಲ್ಲಾಗಳು’ ಎಂದು ಹೇಳಿಲ್ಲ. ಮುಲ್ಲಾ ಎಂದರೆ ಮುಸ್ಲಿಂ ಸಮುದಾಯವಲ್ಲ. ನೀಟ್ ಹೋರಾಟದಲ್ಲಿ ಭಾಗವಹಿಸಿದ್ದ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಶಾಲೆಗಳಲ್ಲಿ ಶಿಕ್ಷಕರೂ ‘ಎದೆ ಸೀಳಿದರೆ ಅಕ್ಷರ ಇಲ್ಲ’ ಎಂದು ಹೇಳುತ್ತಾರೆ. ಹಾಗಾದರೆ ಶಿಕ್ಷಕರ ಮೇಲೂ ಪ್ರಕರಣ ದಾಖಲಿಸುತ್ತಾರೆಯೇ?” ಎಂದು ಪ್ರಶ್ನಿಸಿದರು.
ರಾಜ್ಯದ ಬರ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ನಡೆಸಲಾಗುತ್ತಿದೆ. ಹಲವು ತಾಲೂಕುಗಳಲ್ಲಿ ಶೇ.40ರಿಂದ 90ರಷ್ಟು ಮಳೆ ಕೊರತೆಯಾಗಿದ್ದು, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ಬೆಳೆ ಹಾನಿಯ ಆಧಾರದ ಮೇಲೆ ಪ್ರತಿ ಎಕರೆಗೆ ಪರಿಹಾರ ನೀಡಬೇಕು. ರೈತರಿಗೆ ಹೊಸ ಸಾಲ ಮಂಜೂರು ಮಾಡಬೇಕು, ಹಳೆಯ ಸಾಲ ಮನ್ನಾ ಮಾಡಬೇಕು, ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸಬೇಕು ಹಾಗೂ ಪ್ರತಿ ತಾಲೂಕಿನಲ್ಲೂ ಗೋಶಾಲೆ, ಒಣಹುಲ್ಲು ಮತ್ತು ಹಸಿರು ಮೇವು ಕೇಂದ್ರಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ನೀರಿದ್ದು, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಅಗತ್ಯತೆಗೆ ಅನುಗುಣವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಬರ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಎನ್ಡಿಎ ನಿಯಮಾನುಸಾರ ಕೇಂದ್ರ ತಂಡ ರೈತರನ್ನು ಭೇಟಿ ಮಾಡಲಿದೆ ಎಂದು ತಿಳಿಸಿದರು.
ಬರ ಅಧ್ಯಯನದ ವರದಿಯನ್ನು ರಾಜ್ಯಕ್ಕೆ ಸಲ್ಲಿಸುತ್ತೇನೆ. ನಂತರ ಎನ್.ಡಿ.ಎ. ನಿಯಮದ ಪ್ರಕಾರ ಕೇಂದ್ರ ತಂಡವು ರೈತರನ್ನು ಭೇಟಿ ಮಾಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಹಾಲಪ್ಪ, ಪರಣ್ಣ ಮುನವಳ್ಳಿ, ಬಸವರಾಜ ದಡೇಸುಗೂರು, ಮಾಜಿ ಎಂ.ಎಲ್.ಸಿ. ಅಮರನಾಥ ಪಾಟೀಲ್, ಮಾಜಿ ತುಂಗಭದ್ರಾ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಆಚಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಬಳಿಕ ಸಿ.ಟಿ. ರವಿ ಅವರು ತಾಲೂಕಿನ ಹುಲಿಹೈದಾರ ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿದರು.






