ಡಿಎಸ್ಎಸ್ ಕುರಿತು ಪ್ರತಾಪ್ ಸಿಂಹ ಹೇಳಿಕೆಗೆ ದಲಿತ ಮುಖಂಡರ ಆಕ್ಷೇಪ; ಕ್ಷಮೆಯಾಚನೆಗೆ ಒತ್ತಾಯ!

ಕುಕನೂರು: ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಗೆ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಹನುಮೇಶ ಕಡೇಮನಿ, ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಗಣೇಶೋತ್ಸವದ ಶೋಭಾಯಾತ್ರೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಡಿಎಸ್ಎಸ್ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
‘ಡಿಎಸ್ಎಸ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
ಯುವ ದಲಿತ ಮುಖಂಡ ರಾಘವೇಂದ್ರ ಕಾತರಕಿ ಮಾತನಾಡಿ, ಪ್ರತಾಪ್ ಸಿಂಹ ಅವರು ಕ್ಷಮೆಯಾಚಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಛತ್ರಪ್ಪ ಛಲವಾದಿ, ಭೀಮಣ್ಣ ಬುದಗುಂಪಿ, ಮಲ್ಲು ಜಕ್ಕಲಿ, ಮರಿಸ್ವಾಮಿ ಮಂಗಳೂರು, ಶಂಕರ ಜಕ್ಕಲಿ ಸೇರಿದಂತೆ ಹಲವರು ಇದ್ದರು.




