ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯ : ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ : ಎಲ್ಲರ ಸಲಹೆ ಪಡೆದುಕೊಂಡ ಬಳಿಕ ಸದ್ಯ 90 ದಿನಗಳವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಮುನಿರಾಬಾದ್‌ನ ಕಾಡಾ ಟಿಬಿಪಿ ಸಭಾಂಗಣದಲ್ಲಿ ಮಂಗಳವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲುವೆಗಳಿಗೆ ನೀರು ಹರಿಸುವ ಕುರಿತು ರೈತರ ಸಲಹೆ ಪಡೆಯಲಾಗಿದೆ. ಬಳಿಕ ಈ ಭಾಗದ ಎಲ್ಲ ಜನಪ್ರತಿನಿಧಿಗಳ ಸಭೆ ನಡೆಸಿ ಅವರ ಅಭಿಪ್ರಾಯವನ್ನೂ ಪಡೆದುಕೊಳ್ಳಲಾಗಿದೆ ಎಂದರು.
ಸದ್ಯ ತುಂಗಭದ್ರಾ ಜಲಾಶಯದಲ್ಲಿರುವ ನೀರಿನ ಲಭ್ಯತೆ ಆಧರಿಸಿ 90 ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸುವ ಭರವಸೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹಾಗೂ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಆಧರಿಸಿ ನೀರು ಹರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಈ ಕುರಿತು ಚರ್ಚಿಸಲು ಸೆ.11ರಂದು ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
82 ಟಿಎಂಸಿ ನೀರು ಸಂಗ್ರಹ :
ತುಂಗಭದ್ರಾ ಜಲಾಶಯದಲ್ಲಿ ಸದ್ಯ 82 ಟಿಎಂಸಿ ನೀರು ಸಂಗ್ರಹವಾಗಿದ್ದು, ಲಭ್ಯ ನೀರಿನ ಆಧಾರದ ಮೇಲೆ 90 ದಿನಗಳವರೆಗೆ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
120 ದಿನಗಳವರೆಗೆ ನೀರು ಹರಿಸಲು ಜಲಾಶಯದಲ್ಲಿ ಇನ್ನೂ 16 ಟಿಎಂಸಿ ನೀರಿನ ಕೊರತೆಯಿದೆ. ಮುಂದಿನ ದಿನಗಳಲ್ಲಿ 16 ಟಿಎಂಸಿ ನೀರು ಹರಿದುಬರುವ ನಿರೀಕ್ಷೆಯಿದೆ. ಜತೆಗೆ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ 10 ಟಿಎಂಸಿ ನೀರನ್ನು ಕಾಯ್ದಿರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
120 ದಿನ ನೀರು ಹರಿಸಲು ಒತ್ತಾಯ :
ರೈತರ ಬೇಡಿಕೆಯಂತೆ ಕನಿಷ್ಠ 120 ದಿನಗಳವರೆಗೆ ಕಾಲುವೆಗಳಿಗೆ ನೀರು ಹರಿಸುವುದು ಅಗತ್ಯವಾಗಿದೆ ಎಂದು ಸಚಿವ ಬಿ.ನಾಗೇಂದ್ರ, ಶಾಸಕ ಜೆ.ಎನ್.ಗಣೇಶ ಹಾಗೂ ಬಿ.ಎಂ.ನಾಗರಾಜ ಅವರು ಸಭೆಯಲ್ಲಿ ಸಲಹೆ ನೀಡಿದರು.
ಸಭೆಯಲ್ಲಿ ಸಚಿವರಾದ ಬಿ.ನಾಗೇಂದ್ರ, ಕಾಡಾ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಜಾಹ್ನವಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ, ಮುನಿರಾಬಾದನ ತುಂಗಭದ್ರಾ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರರಾದ ಎಸ್ ಬಿ ಮಲ್ಲಿಗವಾಡ, ಯರಮರಸನ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರಾದ ಸತ್ಯ ನಾರಾಯಾಣ ಶೆಟ್ಟಿ ಹಾಗೂ ಇನ್ನೀತರರು ಇದ್ದರು.






