ಅ.29 ರಿಂದ 31ರವರೆಗೆ ಕೊಪ್ಪಳ ಜಿಲ್ಲೆಗೆ ಉಪ ಲೋಕಾಯುಕ್ತರ ಭೇಟಿ

ಕೊಪ್ಪಳ : ಅ.29ರಿಂದ 31ರವರೆಗೆ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಜನಸಾಮಾನ್ಯರಿಗೆ ಸಂಬಂಧಿಸಿದ ಸೇವೆಗಳಲ್ಲಿ ಪಾರದರ್ಶಕತೆ ತರಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಲೋಕಾಯುಕ್ತ ಕಚೇರಿಯಿಂದ ವಿಡಿಯೋ ಸಂವಾದದ ಮೂಲಕ ಅವರು ಕೊಪ್ಪಳ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 105 ಪ್ರಕರಣಗಳು ಬಾಕಿಯಿದ್ದು, ತಹಶೀಲ್ದಾರರು, ಸಹಾಯಕ ಆಯುಕ್ತರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಅವುಗಳನ್ನು ತಕ್ಷಣ ವಿಲೇವಾರಿ ಮಾಡಬೇಕೆಂದು ತಿಳಿಸಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಮಾತ್ರೆಗಳು ಲಭ್ಯವಿಲ್ಲ ಎಂದು ಹೊರಗೆ ಬರೆದು ಕೊಡುವುದು ಸರಿಯಲ್ಲ ಎಂದು ಎಚ್ಚರಿಸಿದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆ ಪರಿಶೀಲನೆಗೊಳಪಡಿಸಬೇಕು ಹಾಗೂ ನಕಲಿ ವೈದ್ಯರ ಪಟ್ಟಿ ತಯಾರಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೋಷಕ ಆಹಾರ ಹಾಗೂ ಸ್ವಚ್ಛತೆ ಕಾಪಾಡಬೇಕು. ಶಿಕ್ಷಣ ಇಲಾಖೆಯು ಮಳೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡಗಳ ವರದಿ ನೀಡಬೇಕು. ನಗರಸಭೆಗಳು ಖಾಸಗಿ ಭೂಮಿಗಳ ಅತಿಕ್ರಮಣದ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ದಾಖಲೆ ನಿರ್ವಹಣೆಯಲ್ಲಿ ಅನಿಯಮಗಳಿವೆ ಎಂದು ಟೀಕಿಸಿದ ಉಪ ಲೋಕಾಯುಕ್ತರು, ಬೋರವೆಲ್ ದುರಸ್ತಿಗೆ ಅನಾವಶ್ಯಕ ಬಿಲ್ ಮಾಡುವ ಪ್ರಕರಣಗಳನ್ನು ಪರಿಶೀಲಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಿಗೆ ಸೂಚನೆ ನೀಡಿದರು.
ಅರಣ್ಯ ಇಲಾಖೆ, ಕ್ವಾರಿ ಮತ್ತು ಗಣಿಗಾರಿಕೆ ವಿಭಾಗದ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೃಷಿ ಇಲಾಖೆಯು ಅರ್ಹ ರೈತರಿಗೆ ಸಾಲ ಮತ್ತು ಬೆಳೆ ಪರಿಹಾರ ನೀಡುವಲ್ಲಿ ನ್ಯಾಯತೆ ಕಾಪಾಡಬೇಕು ಎಂದು ಹೇಳಿದರು.
ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ ಲೇಬರ್ ಕಾರ್ಡ್, ಇಎಸ್‌ಐ, ಪಿಎಫ್ ಹಾಗೂ ಇನ್ಶೂರೆನ್ಸ್ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು. ಸಿವಿಲ್ ವಿವಾದಗಳಲ್ಲಿ ಪೊಲೀಸರು ನೇರವಾಗಿ ತೊಡಗಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು.
ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ, ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ, ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಯೋಜನಾ ನಿರ್ದೇಶಕ ಪ್ರಕಾಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ, ಸಮಾಜ ಕಲ್ಯಾಣ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.







