ಕೊಪ್ಪಳ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ : ಸೆ.23ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಸಾಂದರ್ಭಿಕ ಚಿತ್ರ
ಕೊಪ್ಪಳ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್–2026) ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2026ರ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಎಸ್ಐಆರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದರು. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.
ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 10,41,388 ಮತದಾರರಿದ್ದಾರೆ. ಇದರಲ್ಲಿ 5,19,142 ಪುರುಷರು, 5,22,189 ಮಹಿಳೆಯರು ಹಾಗೂ 57 ಇತರೆ ಮತದಾರರು ಸೇರಿದ್ದಾರೆ. ಕರಡು ಮತದಾರರ ಪಟ್ಟಿಯನ್ನು ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಎಲ್ಲಾ ಮತಗಟ್ಟೆಗಳು ಹಾಗೂ ಜಿಲ್ಲಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಜಿಲ್ಲೆಯಲ್ಲಿ 1,200ಕ್ಕಿಂತ ಹೆಚ್ಚು ಮತದಾರರಿರುವ ಪ್ರದೇಶಗಳಲ್ಲಿ 37 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1,352ಕ್ಕೆ ಏರಿಕೆಯಾಗಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಗೈರು, ಸ್ಥಳಾಂತರ, ಮೃತ, ಡುಪ್ಲಿಕೇಟ್ ಹಾಗೂ ಇತರೆ ವರ್ಗಗಳಲ್ಲಿ 1,48,826 ಮತದಾರರನ್ನು ಗುರುತಿಸಲಾಗಿದ್ದು, ಈ ಮಾಹಿತಿಯನ್ನೂ ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ.
ಹೊಸ ಮತದಾರರ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು ಅಥವಾ ತಿದ್ದುಪಡಿಗಾಗಿ ನಮೂನೆ–6, 6ಎ, 7 ಮತ್ತು 8ರ ಮೂಲಕ ಅರ್ಜಿಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಅಥವಾ ಚುನಾವಣಾ ಆಯೋಗದ ಆನ್ಲೈನ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಆಗಸ್ಟ್ 29, 30 ಹಾಗೂ ಸೆಪ್ಟೆಂಬರ್ 5, 6, 12, 13, 19 ಮತ್ತು 20ರಂದು ವಿಶೇಷ ನೋಂದಣಿ ಅಭಿಯಾನ ನಡೆಸಲಾಗುತ್ತದೆ. ವಸತಿ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಪ್ರದೇಶಗಳು ಸೇರಿದಂತೆ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸ್ಥಳಗಳಲ್ಲಿ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ನೋಂದಣಿ ಕಾರ್ಯ ನಡೆಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೊಪ್ಪಳ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆದಿರುವುದಕ್ಕೆ ಜಿಲ್ಲಾಡಳಿತ ಮತ್ತು ಬಿಎಲ್ಒಗಳ ಕಾರ್ಯವನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಕರಡು ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿತರಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಲ್ಲಾ ಚುನಾವಣಾ ತಹಶೀಲ್ದಾರ ರವಿ ವಸ್ತ್ರದ್, ಜಿಲ್ಲೆಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃ? ಇಟ್ಟಂಗಿ, ರಾಜು ಬಾಕ್ಳೆ, ಸೋಮನಗೌಡ, ಕೆ.ಎಸ್ ಮೈಲಾರಪ್ಪ, ಮಹೇಬೂಬಪಾಶಾ ಜಮಖಾಂದಾರ್, ಶರಣು ಶೆಟ್ಟರ್ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






