ಬರ ಪರಿಹಾರ; ಕೇಂದ್ರವೂ ತನ್ನ ಪಾಲಿನ ನೆರವು ಘೋಷಿಸಲಿ : ಸಚಿವ ಶಿವರಾಜ್ ತಂಗಡಗಿ
"ಬಿಜೆಪಿ ನಾಯಕರು ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರದ ಮೇಲೆ ಒತ್ತಡ ಹೇರಲಿ"

ಕೊಪ್ಪಳ: ರಾಜ್ಯ ಸರ್ಕಾರ ಪ್ರತಿ ರೈತನಿಗೆ ಒಟ್ಟು 5 ಸಾವಿರ ರೂ. ಬರ ಪರಿಹಾರ ನೀಡಲು ನಿರ್ಧರಿಸಿದೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ರೈತರಿಗೆ ಎಷ್ಟು ಪರಿಹಾರ ನೀಡಲಿದೆ ಎಂಬುದನ್ನು ಘೋಷಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಆಗ್ರಹಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಪ್ರತಿ ರೈತನಿಗೆ 2,500 ರೂ. ಬರ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 2,500 ರೂ. ಸೇರಿಸಿ ಒಟ್ಟು 5 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಮೊದಲ ಕಂತಿನ 2,500 ರೂ. ಅನ್ನು ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಒಂದು ವೇಳೆ ರೈತರಿಗೆ ಹಣ ತಲುಪದಿದ್ದರೆ, ಅವರು ಮನವಿ ಸಲ್ಲಿಸಿದ ಬಳಿಕ ಪರಿಶೀಲಿಸಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ನಮ್ಮ ಸರ್ಕಾರ ಸದಾ ರೈತರ ಪರವಾಗಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಈಗಾಗಲೇ ಕೇಂದ್ರ ಸರ್ಕಾರಕ್ಕೂ ಬರ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಹೀಗಾಗಿ ಕೇಂದ್ರವು ರೈತರಿಗೆ ಎಷ್ಟು ಪರಿಹಾರ ನೀಡಲಿದೆ ಎಂಬುದನ್ನು ಘೋಷಿಸಲಿ ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಜಿಎಸ್ಟಿ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವುದರಿಂದ ಸಹಜವಾಗಿಯೇ ದಿನಬಳಕೆಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿರುವುದು ಸರ್ಕಾರದ ವೈಫಲ್ಯವೇ? ರಾಜ್ಯದಲ್ಲಿ ಬಿಜೆಪಿಯಷ್ಟು ವಿಫಲವಾದ ವಿರೋಧ ಪಕ್ಷ ಮತ್ತೊಂದಿಲ್ಲ. ಆಡಳಿತ ನಡೆಸುವಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜ. ಅಂತಹ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬೆಲೆ ಏರಿಕೆಗೆ ಕೇಂದ್ರವೇ ಹೊಣೆ :
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪದೇಪದೇ ಏರಿಕೆ ಮಾಡುತ್ತಿದ್ದಾಗ ಬಿಜೆಪಿ ನಾಯಕರು ಕಣ್ಣುಮುಚ್ಚಿ ಕುಳಿತಿದ್ದರೇ? ಯುಪಿಎ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಷ್ಟಿದ್ದವು, ಈಗ ಎಷ್ಟಿವೆ ಎಂಬುದನ್ನು ಗಮನಿಸಲಿ. ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿದೆ. ಆದರೆ, ರಾಜ್ಯ ಸರ್ಕಾರ ಎಷ್ಟು ಬೆಲೆ ಏರಿಕೆ ಮಾಡಿದೆ? ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರದ ಜಿಎಸ್ಟಿ ನೀತಿ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವೇ ಪ್ರಮುಖ ಕಾರಣವಾಗಿದೆ ಎಂದರು.
ಕಚ್ಚಾ ತೈಲದ ಬೆಲೆ ಕಡಿಮೆಯಿದ್ದ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿತ್ತು. ಇದಕ್ಕೆ ಹೊಣೆ ಯಾರು? ಬೆಲೆ ಏರಿಕೆಗೆ ಕೇಂದ್ರವೇ ಕಾರಣ. ಬಿಜೆಪಿ ನಾಯಕರಿಗೆ ಸಾಮಾನ್ಯ ಜ್ಞಾನವಿಲ್ಲವೇ? ಅವರಿಗೆ ಮಾನ-ಮರ್ಯಾದೆ ಇದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಬೆಲೆಗಳನ್ನು ಕಡಿಮೆ ಮಾಡಿಸಲಿ. ಆಗ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆಯೂ ಇಳಿಕೆಯಾಗಲಿದೆ ಎಂದು ಶಿವರಾಜ್ ತಂಗಡಗಿ ಹೇಳಿದರು.






