ಉದ್ಯೋಗ ಸೃಷ್ಟಿಗೆ ಕಾರ್ಖಾನೆಗಳು ಅವಶ್ಯ : ಸಂಸದ ರಾಜಶೇಖರ ಹಿಟ್ನಾಳ

ಕೊಪ್ಪಳ: ಯಾವುದೇ ಊರು, ರಾಜ್ಯ ಅಥವಾ ದೇಶ ಅಭಿವೃದ್ದಿಯಾಗಬೇಕಾದರೆ ಕಾರ್ಖಾನೆಗಳು ಅವಶ್ಯಕ. ಕಾರ್ಖಾನೆಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗುತ್ತವೆ ಮತ್ತು ಎಲ್ಲ ರೀತಿಯ ಅಭಿವೃದ್ಧಿಗೂ ದಾರಿಯು ತೆರೆದಿಡುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಅಭಿಪ್ರಾಯಪಟ್ಟರು.
ಅವರು ಕೊಪ್ಪಳದ ಮಧುಶ್ರೀ ಗಾರ್ಡನ್‌ನಲ್ಲಿ ವಿಹಾನ್ ಹೃದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೆ.ಎಸ್. ಆಸ್ಪತ್ರೆ, ರೆಡ್‌ಕ್ರಾಸ್ ಸಂಸ್ಥೆ, ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಗೆ ಹೊಸ ಕಾರ್ಖಾನೆಗಳು ಬರುತ್ತಿವೆ. ಆದರೆ ಜನವಸತಿ ಪ್ರದೇಶದಿಂದ ದೂರ ಇರಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಉದ್ಯಮಿ ಶ್ರೀನಿವಾಸ ಗುಪ್ತಾ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕೆಎಫ್‌ಐಎಲ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಪಿ.ನಾರಾಯಣ ಸಂಸ್ಥೆಯ ಸಮಾಜಮುಖಿ ಚಟುವಟಿಕೆಗಳ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಮಾತನಾಡಿ, 1993ರಲ್ಲಿ ಬೇವಿನಹಳ್ಳಿಯ ಹತ್ತಿರ ಸ್ಥಾಪನೆಗೊಂಡ ಕಾರ್ಖಾನೆ ಬೀಡುಕಬ್ಬಿಣ ಮತ್ತು ಬೂಡುಕಬ್ಬಿಣದ ಎರಕಗಳನ್ನು ಉತ್ಪಾದಿಸಿ, ದೇಶ-ವಿದೇಶದ ವಾಹನ ತಯಾರಿಕಾ ವಲಯಕ್ಕೆ ಪೂರೈಸುತ್ತಿದೆ. ಜೊತೆಗೆ ಸಮಾಜಮುಖಿ ಹೊಣೆಗಾರಿಕೆಯನ್ನು ನಿರಂತರವಾಗಿ ನಿಭಾಯಿಸಿದೆ ಎಂದರು.
ಈ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. 220 ಜನರು ಹೃದಯ ತಪಾಸಣೆ ಹಾಗೂ 175 ಜನರು ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಂಡರು. ಹಳ್ಳಿಗಳಿಂದ ಬಂದ ಜನರೂ ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವಿಹಾನ್ ಆಸ್ಪತ್ರೆಯ ವೈದ್ಯರು, ಕಾರ್ಖಾನೆಯ ಹಿರಿಯ ಅಧಿಕಾರಿಗಳು, ಮಹಿಳಾ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸ್ವಾಗತವನ್ನು ಶಿವಯ್ಯ ಸ್ವಾಮಿ, ನಿರೂಪಣೆಯನ್ನು ರಮೇಶ್ ದೀಕ್ಷಿತ ಮತ್ತು ವಂದನೆಯನ್ನು ಉದ್ದವ್ ಕುಲಕರ್ಣಿ ನೆರವೇರಿಸಿದರು.







