ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆ ಸಮರ್ಪಕವಾಗಿ ನಡೆಯಲಿ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಕೊಪ್ಪಳ: ರೈತರಿಗೆ ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ ಅವರು ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ವಿತರಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮೇ 19ರಂದು, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು, ಉಪ ನಿರ್ದೇಶಕರು, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕಾರಟಗಿ, ಕುಕನೂರ, ಕನಕಗಿರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಮಾರ್ಕೆಟಿಂಗ್ ಅಧಿಕಾರಿಗಳು, ರಸಗೊಬ್ಬರ ವಿತರಕ ಸಂಘದ ಅಧ್ಯಕ್ಷರು ಮತ್ತು ಕೃಷಿ ಇಲಾಖೆಯ ಇನ್ನಿತರ ಅಧಿಕಾರಿಗಳೊಂದಿಗೆ ಗೂಗಲ್ ಮೀಟ್ ನಡೆಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆಗಳು ವಾಡಿಕೆಗಿಂತ ಮುನ್ನವೇ ಆರಂಭವಾಗಿವೆ. ಜಿಲ್ಲೆಯಲ್ಲಿ ಈಗಾಗಲೇ ಬಾರಿ ಬಿರುಸಿನ ಮಳೆ ಬಿದ್ದಿರುವುದರಿಂದ ರೈತ ಸಮುದಾಯದಿಂದ ಬಿತ್ತನೆ ಕಾರ್ಯಗಳು ಚುರುಕುಗೊಂಡಿವೆ. ಆದ್ದರಿಂದ ನೀರಾವರಿ ಆಶ್ರಿತ ರೈತರು ಸೇರಿದಂತೆ ಬಿತ್ತನೆ ಕಾರ್ಯ ಆರಂಭಿಸುವ ಎಲ್ಲ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜಿಲ್ಲಾದ್ಯಂತ ರಸಗೊಬ್ಬರ ವಿತರಣೆ ಕಾರ್ಯವು ಶಿಸ್ತು ಬದ್ಧವಾಗಿ ನಡೆಯಬೇಕು ಎಂದು ಹೇಳಿದರು.
ಜಿಲ್ಲೆಯ ಪ್ರತಿಯೊಬ್ಬ ರೈತರಿಗೆ ಅನುಕೂಲವಾಗುವಂತೆ ಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಇಲ್ಲ. ರಸಗೊಬ್ಬರ ಸಿಗದಿದ್ದರೂ ನಾಳೆಯಾದರೂ ತಪ್ಪದೇ ಲಭ್ಯವಾಗುತ್ತದೆ ಎಂಬ ಮಾಹಿತಿಯನ್ನು ರೈತರಿಗೆ ನೀಡಬೇಕು. ರಸಗೊಬ್ಬರ ಸಿಗುವುದಿಲ್ಲ ಎಂದು ಯಾವುದೇ ಭಾಗದ ರೈತರು ಆತಂಕಕ್ಕೆ ಒಳಗಾಗಬಾರದು. ಆದ್ದರಿಂದ ರಸಗೊಬ್ಬರದ ಅವಶ್ಯಕತೆ ಇರುವ ಎಲ್ಲ ರೈತರಿಗೂ ರಸಗೊಬ್ಬರವು ಸಕಾಲಕ್ಕೆ ಲಭ್ಯವಾಗುವಂತೆ ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಗೂಗಲ್ ಮೀಟ್ ನಲ್ಲಿ ಜಂಟಿ ಕೃಷಿ ನಿರ್ದೇಶಕರು, ಉಪ ನಿರ್ದೇಶಕರು, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕಾರಟಗಿ, ಕುಕನೂರ ಹಾಗೂ ಕನಕಗಿರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಮಾರ್ಕೆಟಿಂಗ್ ಅಧಿಕಾರಿಗಳು, ರಸಗೊಬ್ಬರ ವಿತರಕ ಸಂಘದ ಅಧ್ಯಕ್ಷರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.






