ಬಲ್ಡೋಟಾ ಕಾರ್ಖಾನೆ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲ : ಸಂಸದ ಕೆ.ರಾಜಶೇಖರ ಹಿಟ್ನಾಳ್

ಕೊಪ್ಪಳ: ಬಲ್ಡೋಟಾ ಕಾರ್ಖಾನೆಯನ್ನು ತೊಲಗಿಸುವುದು, ಕಾರ್ಖಾನೆಗಳಿಂದ ಬಾಧಿತವಾಗಿರುವ 22 ಹಳ್ಳಿಗಳ ಜನರ ಜೀವ ರಕ್ಷಿಸುವುದು ಹಾಗೂ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.
ಕೊಪ್ಪಳ ನಗರಸಭೆ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 362ನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಅ.31ರಂದು ಕರೆ ನೀಡಿರುವ ಕೊಪ್ಪಳ ಬಂದ್ ಯಶಸ್ವಿಯಾಗಬೇಕು ಎಂದು ಕರೆ ನೀಡಿದರು.
ಹೋರಾಟದ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಭೇಟಿಯ ದಿನಾಂಕ ನಿಗದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಈ ಕುರಿತು ಸಚಿವರು ಮತ್ತು ಶಾಸಕರೊಂದಿಗೂ ಚರ್ಚಿಸುವುದಾಗಿ ಭರವಸೆ ನೀಡಿದರು.
“ಇದು ನಮ್ಮ ಜನರ ಹೋರಾಟ. ಹೀಗಾಗಿ ಕಾಲಕಾಲಕ್ಕೆ ಸಾಧ್ಯವಾದ ಸಹಾಯ ಮತ್ತು ಸಹಕಾರ ನೀಡುತ್ತ ಬಂದಿದ್ದೇನೆ. ಮುಂದೆಯೂ ಹೋರಾಟದ ಜೊತೆಗೆ ಇರುತ್ತೇನೆ. ಜನರಿಗೆ ಬೇಡವಾದರೆ ನಮಗೂ ಬೇಡ. ಜನರು ತಮ್ಮ ನಿಲುವಿನಲ್ಲಿ ಗಟ್ಟಿಯಾಗಿ ನಿಲ್ಲಬೇಕು” ಎಂದು ಹೇಳಿದರು.
ಸರ್ಕಾರ ತಮ್ಮದೇ ಆಗಿದ್ದರೂ ಸಮಸ್ಯೆ ಪರಿಹಾರಕ್ಕೆ ನಿರ್ದಿಷ್ಟ ಪ್ರಕ್ರಿಯೆ ಇರುತ್ತದೆ. ಸರ್ಕಾರ ತನ್ನ ಕೆಲಸ ಮಾಡುತ್ತಿರುವಾಗ ಜನರು ತಮ್ಮ ಹೋರಾಟದ ಮೂಲಕ ಬಲ್ಡೋಟಾ ಕಾರ್ಖಾನೆಯನ್ನು ತೊಲಗಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು ಎಂದು ಸಂಸದರು ತಿಳಿಸಿದರು.
ತುಂಗಭದ್ರಾ ಜಲಾಶಯ ಹಾಗೂ ನದಿ ನೀರಿನ ಮಾಲಿನ್ಯ ತಡೆಗಟ್ಟುವುದು, ಕಾರ್ಖಾನೆಗಳಿಂದ ಬಾಧಿತವಾಗಿರುವ ಹಳ್ಳಿಗಳ ಜನರ ಆರೋಗ್ಯ ರಕ್ಷಣೆ ಮತ್ತು ಬಸಾಪುರ ಕೆರೆಯ ಸಾರ್ವಜನಿಕ ಬಳಕೆಗೆ ಸಂಬಂಧಿಸಿದ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಸಮಿತಿ ಧರಣಿ ನಡೆಸುತ್ತಿದೆ.
ಧರಣಿಯಲ್ಲಿ ಹೋರಾಟದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಟರಾಜ ಸವಡಿ, ಡಿ.ಎಂ. ಬಡಿಗೇರ, ರವಿ ಕಾಂತನವರ, ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರ, ರಮೇಶ ತುಪ್ಪದ, ಶಂಭುಲಿಂಗಪ್ಪ ಹಾರಗೇರಿ ಹಾಗೂ ರಾಜಶೇಖರ ಏಳುಬಾವಿ ಉಪಸ್ಥಿತರಿದ್ದರು.






