ಗಂಗಾವತಿ | ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸಬೇಕು: ರಾಮ್ ಎಲ್. ಅರಸಿದ್ದಿ

ಗಂಗಾವತಿ : ಭಾದ್ರಪದ ಮಾಸದಲ್ಲಿ ಬರುವ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕೆಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಕರೆ ನೀಡಿದರು.
ಗಂಗಾವತಿ ನಗರದಲ್ಲಿರುವ ಭಾರತೀಯ ವೈದ್ಯಕೀಯ ಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಹಬ್ಬಗಳ ಮೂಲ ಉದ್ದೇಶವೇ ಪ್ರೀತಿ, ವಿಶ್ವಾಸ ಮತ್ತು ಸಹಜೀವನದ ಸಂಕೇತ. ಯಾವುದೇ ಅಹಿತಕರ ಘಟನೆ ಕಂಡುಬಂದಲ್ಲಿ ಪ್ರತಿಷ್ಠಾಪನೆಯ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಜೊತೆಗೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು,” ಎಂದು ಎಚ್ಚರಿಸಿದರು.
ಗಣೇಶ ವಿಸರ್ಜನೆ ಪ್ರಕ್ರಿಯೆಯನ್ನು ರಾತ್ರಿ 12 ಗಂಟೆಯೊಳಗೆ ಮುಗಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಪ್ರವೃತ್ತಿ ತಡೆಯಲು ಕಡ್ಡಾಯವಾಗಿ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸೂಕ್ತ ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಪಿ.ಐ. ಪ್ರಕಾಶ್ ಮಾಳೆ, ಪೌರಾಯುಕ್ತ ವಿರುಪಾಕ್ಷ ಆರ್ ಮೂರ್ತಿ, ತಹಸಿಲ್ದಾರ್ ರವಿ ಅಂಗಡಿ, ನಗರಸಭೆಯ ಅಧ್ಯಕ್ಷೆ ಹಿರಾಬಾಯಿ ನಾಗರಾಜ್ ಸಿಂಗ್, ಜೆಸ್ಕಾಂ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಪಂಪಣ್ಣ ನಾಯಕ್, ಪ್ರಸನ್ನ ದೇಸಾಯಿ, ನಾಗರಾಜ್ ಇಂಗಳಗಿ, ಜೋಗದ ನಾರಾಯಣಪ್ಪ ನಾಯಕ್, ಶಾಮಿದ್ ಮನಿಯಾರ್, ಹನುಮಂತಪ್ಪ ನಾಯಕ್, ಎಸ್.ಬಿ. ಖಾದ್ರಿ, ಮೌಲಾಸಾಬ್ ಸೇರಿದಂತೆ ಇನ್ನೂ ಅನೇಕರು ಈ ಶಾಂತಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.







