Gangavathi | ಮಲ್ಲಾಪುರ ಕೆರೆ ಸೀಮೆಯಲ್ಲಿ ಚಿರತೆ ಸಂಚಾರ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಗಂಗಾವತಿ : ತಾಲೂಕಿನ ಮಲ್ಲಾಪುರ ಕೆರೆ ಸೀಮೆ ಪ್ರದೇಶದಲ್ಲಿ ಆಕಳ ಕರುವಿನ ಮೇಲೆ ದಾಳಿ ನಡೆಸಿ ಕೊಂದಿದ್ದು ಹುಲಿಯಲ್ಲ, ಚಿರತೆ ಎಂಬುದು ಸಿಸಿ ಕ್ಯಾಮರಾದ ದೃಶ್ಯದಿಂದ ದೃಢಪಟ್ಟಿದೆ.
ಸೆ. 29ರಂದು ಆನೆಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನದುರ್ಗ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಾಡುಪ್ರಾಣಿಯ ದಾಳಿಗೆ ಕರುವೊಂದು ಮೃತಪಟ್ಟಿರುವುದನ್ನು ಗಮನಿಸಿದ್ದರು. ಕರುವಿನ ಹಿಂಭಾಗದಲ್ಲಿ ಗಾಯಗಳಾಗಿದ್ದು, ಮಾಂಸವನ್ನು ಕಾಡುಪ್ರಾಣಿ ತಿಂದಿರುವುದು ಕಂಡುಬಂದಿತ್ತು.
ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ದಾಳಿ ನಡೆಸಿದ ಪ್ರಾಣಿ ಯಾವುದೆಂಬುದನ್ನು ಖಚಿತಪಡಿಸಿಕೊಳ್ಳಲು ಕರು ಮೃತಪಟ್ಟ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಸೆ. 30ರಂದು ರಾತ್ರಿ 8.25ರ ಸುಮಾರಿಗೆ ಚಿರತೆಯೊಂದು ಸತ್ತ ಕರುವಿನ ಬಳಿ ಬಂದು ಮಾಂಸ ತಿನ್ನುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದರಿಂದ ಕರುವಿನ ಮೇಲೆ ದಾಳಿ ನಡೆಸಿದ್ದು ಚಿರತೆಯೇ ಎಂಬುದು ಖಚಿತವಾಗಿದೆ. ಮಲ್ಲಾಪುರ ಕೆರೆ ಸೀಮೆಯಲ್ಲಿ ಹುಲಿ ಸಂಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳು ಸತ್ಯಕ್ಕೆ ದೂರವಾಗಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಚಿರತೆ ಸಂಚಾರ ಹಿನ್ನೆಲೆಯಲ್ಲಿ ದನಗಾಹಿಗಳು, ಕುರಿಗಾಹಿಗಳು ಹಾಗೂ ಸ್ಥಳೀಯರು ರಾತ್ರಿ ಮತ್ತು ಮುಂಜಾನೆ ವೇಳೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.






