ಗಂಗಾವತಿ | ಹದಿನೈದನೇ ಶತಮಾನದ ಎರಡು ಶಾಸನಗಳು ಪತ್ತೆ

ಗಂಗಾವತಿ: ನಗರದ ಪಂಪಾನಗರ ಮತ್ತು ವಿರೂಪಾಪುರಗಳಲ್ಲಿ ಎರಡು ಶಾಸನಗಳು ಪತ್ತೆಯಾಗಿದ್ದು, ಈ ಶಾಸನಗಳು ಹದಿನೈದನೇ ಶತಮಾನಕ್ಕೆ ಸೇರಿದ್ದಾಗಿವೆ.
ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಅವರು ಈ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ.
ಮೊದಲ ಶಾಸನ ಪಂಪಾನಗರದ ಬೆಟ್ಟಕ್ಕೆ ಹೊಂದಿಕೊಂಡಿರುವ ಪಠಾಣರ ಖಬರಸ್ಥಾನದ ವ್ಯಾಪ್ತಿಯಲ್ಲಿರುವ ಹುಟ್ಟು ಬಂಡೆಯ ಮೇಲೆ ಮೂರು ಸಾಲುಗಳಲ್ಲಿ ಬರೆಯಲಾಗಿದೆ .ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವಲಿಂಗದ ಚಿತ್ರಗಳಿವೆ. ಶಾಸನದ ಪಾಠ ಶುದ್ಧವಾಗಿಲ್ಲ. ಶಾಸನ ಪಾಠವನ್ನು "ಶ್ರೀ ಗೊಂಗಡಯ್ಯನ ಮನೆ ಮಣುಪ ಕಾಳಗಿ ಕೊಂಡ ಕೊಂಡ ಪಾದಕ್ಕೆ ಅರುಹಿ ಕೊಂಡದು" ಎಂದು ಸಂಗ್ರಹಿಸಬಹುದು.
ಈ ಶಾಸನದಿಂದ ಅನತಿ ದೂರದಲ್ಲಿರುವ ಮತ್ತೊಂದು ಗುಂಡಿನ ಮೇಲೆ" ಶ್ರೀ ವಿದೂರಾನಂದರ ಪಾದವು" ಮತ್ತು " ಪಿನಿಬುಸಿ ಮಾಯಣ್ಣ"ಎಂಬ ಬರಹಗಳಿವೆ. ಈ ಗುಂಡಿನ ಮೇಲೆ ಕೊಂಡ ಕುಂದಾಚಾರ್ಯರ ಶಿಷ್ಯ ವಿಧೂರಾನಂದ ಪಾದಗಳ ಚಿತ್ರಗಳನ್ನು ಕೆತ್ತಲಾಗಿದೆ. ಈ ಶಾಸನದಿಂದ ನೇರವಾಗಿ ಬೆಟ್ಟದ ಮಧ್ಯಭಾಗದ ಒಂದು ಗವಿಯಲ್ಲಿ ಜೈನ ಶೀಥಲನಾಥ ತೀರ್ಥಂಕರರ, ಯಕ್ಷಿಯ ಮತ್ತು ಅಶ್ವ ಸವಾರಿ ಅರಸನ ಶಿಲ್ಪಗಳಿವೆ. ಈ ಶಿಲ್ಪ ಮತ್ತು ಶಾಸನಗಳನ್ನು ಅನುಲಕ್ಷಿಸಿ ಇವು ಜೈನ ಧರ್ಮಕ್ಕೆ ಸಂಬಂಧಿಸಿದ ವೆಂದು ಸ್ಪಷ್ಟವಾಗುತ್ತದೆ.
ಪ್ರಸ್ತುತ ಶಾಸನವು ಗೊಂಗಡಯ್ಯ ಎಂಬ ಭಕ್ತನ ಮನೆಗೆ ಕೊಂಡಕುಂದಾ ಎಂಬ ಜೈನ ಯತಿಗಳು ಪಾದ ವಿರಿಸಲು ( ಆಗಮಿಸಲು) ಅರುಹಿಕೊಂಡ ಸಂಗತಿಯನ್ನು ವಿವರಿಸುತ್ತದೆ. ಕೊಂಡ ಕುಂದಾಚಾರ್ಯ, ವಿಧೂರಾನಂದರು ಎಂಬ ಜೈನ ಯತಿಗಳು ಶಿಲ್ಪಗಳಿರುವ ಗವಿಯಲ್ಲಿ ಧ್ಯಾನಸ್ಥರಾಗಿರಬಹುದು. ಇಲ್ಲವೇ ಸಲ್ಲೇಖನ ವ್ರತವನ್ನ ಆಚರಿಸಿರಬಹುದಾದ ಸಾಧ್ಯತೆ ಇದೆ. ಶಾಸನದ ಅಕ್ಷರಗಳ ಶೈಲಿಯಿಂದ ಇದು ಹದಿನೈದನೇ ಶತಮಾನಕ್ಕೆ ಸೇರುತ್ತದೆ.
ಎರಡನೇ ಶಾಸನವು ವಿರುಪಾಪುರನಗರದ ಕೃಷ್ಣ ನಾಯಕ್ ಎಂಬವರ ಮನೆಯ ಹಿಂಬದಿಯಲ್ಲಿ ಹುಟ್ಟು ಬಂಡೆಯಲ್ಲಿ ನಾಲ್ಕು ಸಾಲುಗಳಲ್ಲಿ ಕೆತ್ತಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವಲಿಂಗದ ಕೆತ್ತನೆಗಳಿವೆ. ಶಾಸನದ ಅಕ್ಷರಗಳು ಅಲ್ಲಲ್ಲಿ ಸವೆದಿವೆ. ಹಾಗಾಗಿ ಪೂರ್ಣ ವಿಷಯವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇರುವ ವಿಷಯವನ್ನು ಗ್ರಹಿಸಿ ಶ್ರೀ ಪೌಢದೇವಪ್ಪ ನಾಯಕರು ವಿರೂಪಾಪುರದಲ್ಲಿ ಯಾವುದೋ ದೇವರಿಗೆ ಗದ್ದೆಯನ್ನು ದಾನವಾಗಿ ನೀಡಿದ ವಿಷಯವನ್ನು ತಿಳಿಸುತ್ತದೆ. ಈ ಶಾಸನವೂ ಕೂಡ ಹದಿನಾರನೇ ಶತಮಾನಕ್ಕೆ ಸಂಬಂಧಿಸಿದೆ.
ಗಂಗಾವತಿಯಲ್ಲಿ ಈಗಾಗಲೇ ಮಳೆ ಮಲ್ಲೇಶ್ವರ ಬೆಟ್ಟದ ಹಿಂಬದಿಯ ಒಂದು ಚಿಕ್ಕ ಗುಂಡಿನ ಮೇಲೆ 5 ಸಾಲುಗಳ ಶಾಸನವು ದೊರೆತಿದ್ದು, ಅದರ ಜೊತೆಗೆ ಇವೆರಡು ಹೊಸ ಸೇರ್ಪಡೆಯಾಗಿವೆ. ಒಟ್ಟಿನಲ್ಲಿ ಗಂಗಾವತಿಯ15 ಮತ್ತು16ನೇ ಶತಮಾನದ ಇತಿಹಾಸವನ್ನು ತಿಳಿದುಕೊಳ್ಳಲು ಈ ಶಾಸನಗಳು ಸಹಾಯಕವಾಗಿದ್ದು, ಇವುಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಲಾಗುವುದೆಂದು ಎಂದು ಡಾ. ಕೋಲ್ಕಾರ್ ತಿಳಿಸಿದ್ದಾರೆ.
ಶಾಸನಗಳ ಶೋಧನೆಯಲ್ಲಿ ದಿವಂಗತ ಸೋಮಪ್ಪ ಯಲಬುರ್ಗಿ, ಬಸವರಾಜ್ ಮ್ಯಾಗಳಮನಿ, ಲಕ್ಷ್ಮಣ್ ಗೌಡ, ಪೀರಮ್ಮ ಭೀಮಣ್ಣ ನಾಯ್ಕ್ ಸಹಕರಿಸಿದ್ದಾರೆಂದು ಅವರು ತಿಳಿಸಿದ್ದಾರೆ.







