ಗಂಗಾವತಿ | ಗಣೇಶ ಮೂರ್ತಿ ಬಳಿ ಮಲಗಿದ್ದ ಬಾಲಕನನ್ನು ಬೆಂಕಿ ಹಚ್ಚಿ ಕೊಲೆ ಯತ್ನ: ಬಾಲಕನ ಸ್ಥಿತಿ ಚಿಂತಾಜನಕ; ಆರೋಪಿಯ ಬಂಧನ

ಗಂಗಾವತಿ: ನಗರದ ಮುಜಾವರ ಕ್ಯಾಂಪ್‌ನಲ್ಲಿ ಗಣೇಶ ಮೂರ್ತಿ ಬಳಿ ಮಲಗಿದ್ದ 13 ವರ್ಷದ ಬಾಲಕ ಮುಹಮ್ಮದ್ ರಿಯಾನ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಸೆ.18ರ ಬೆಳಗಿನ ಜಾವ ಸುಮಾರು 2 ಗಂಟೆಗೆ ಘಟನೆ ನಡೆದಿದೆ. ಹಮಾಲರ ಕಾಲೊನಿಯ ಸಂತೋಷ ಅಲಿಯಾಸ್ ಸಂತೂ ಎಂಬಾತ ಬಾಲಕನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ.
ಬೆಂಕಿಯಿಂದ ಬಾಲಕನ ಎದೆ, ಕುತ್ತಿಗೆ ಹಾಗೂ ಎಡಗೈ ಭಾಗಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ. ಚೀರಾಟ ಕೇಳಿದ ಸ್ಥಳೀಯರು ಬಾಲಕನನ್ನು ರಕ್ಷಿಸಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ, ಅಲ್ಲಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕನ ಸಂಬಂಧಿ ಜಿಶಾನ್ ನೀಡಿದ ದೂರಿನ ಮೇರೆಗೆ ಗಂಗಾವತಿ ನಗರ ಠಾಣೆ ಪೊಲೀಸರು ಸಂತೋಷನನ್ನು ಬಂಧಿಸಿ, ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.
ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.






