ಕೇಂದ್ರದಿಂದ ನಮ್ಮ ಪಾಲಿನ ಹಣ ಬರದಿದ್ದರೂ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಸ್ಥಿರವಾಗಿ ಇಟ್ಟಿದ್ದೇವೆ : ಜಿ.ಪರಮೇಶ್ವರ್

ಕೊಪ್ಪಳ : ಕೇಂದ್ರ ಸರಕಾರದಿಂದ ನಮ್ಮ ಪಾಲಿನ ಹಣ ಸರಿಯಾಗಿ ಬರದಿದ್ದರೂ ನಾವು ನಮ್ಮ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಸ್ಥಿರವಾಗಿ ಇಟ್ಟಿದ್ದೇವೆ. ನಮ್ಮ ರಾಜ್ಯವು ಜಿಎಸ್‌ಟಿ ಸಂಗ್ರಹ ಮಾಡುವುದರಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿ ಇದೆ. ಜಿಡಿಪಿಯಲ್ಲಿ ಕೂಡ ಮುಂದಿದ್ದೇವೆ. ರಾಜ್ಯ ದಿವಾಳಿಯಾಗಿದ್ದರೆ ಇದೆಲ್ಲ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಮಾಜಿ ಮಂತ್ರಿ ಕೆಎಚ್ ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೆವು. ನಮ್ಮ ವಿರೋಧಿಗಳಿಂದ ಗ್ಯಾರಂಟಿ ಯೋಜನೆಗಳಿಗೆ ಟೀಕೆಗಳು ಬಂದವು. ಈ ರಾಜ್ಯ ದಿವಾಳಿಯಾಗಲಿದೆ ಎಂದು ಹೇಳಿದರು. ಆದರೆ ಅವರೇ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದರು ಎಂದು ಹೇಳಿದರು.
ಈಗಿನ ಕಾಲದ ರಾಜಕಾರಣದಲ್ಲಿ ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುವ ವ್ಯಕ್ತಿ ಕೆ.ಎಚ್. ಪಾಟೀಲ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಖುಷಿ ತಂದಿದೆ ಎಂದರು.
ಕೆ.ಹೆಚ್ ಪಾಟೀಲ್ ಅವರು ಒಂದು ವೇಳೆ ಮುಖ್ಯಮಂತ್ರಿ ಆಗಿದ್ದರೆ ಇಡೀ ಕರ್ನಾಟಕದ ಅಭಿವೃದ್ಧಿಯ ಚಿತ್ರಣವೇ ಬದಲಾಗುತ್ತಿತ್ತು. ಕರ್ನಾಟಕ ಎಂಬ ಹೆಸರನ್ನು ಮೊದಲ ಬಾರಿಗೆ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪ ಮಾಡಿದವರು ಕೆಎಚ್ ಪಾಟೀಲ್ ಅವರು. ಅವರು ಹಾಗೆ ಮಾಡಿದ್ದರಿಂದ ನಾವು ಈ ರಾಜ್ಯ ವನ್ನು ಕರ್ನಾಟಕ ಎಂದು ಕರೆಯುತಿದ್ದೇವೆ ಎಂದು ಹೇಳಿದರು.
ಸಿಎಂ ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ್ ರಾಯರೆಡ್ಡಿ ಮಾತನಾಡಿ, ನಮ್ಮ ಸರಕಾರದಲ್ಲಿ ಹಣದ ಕೊರತೆ ಇಲ್ಲ. ಒಳ್ಳೆಯ ಆಡಳಿತವನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ್ ಹಿಟ್ನಾಳ, ಆರ್.ವಿ.ದೇಶಪಾಂಡೆ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಕಾಡ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ, ಜಿಪಂ ಸಿಇಒ ವರ್ಣಿತ್ ನೇಗಿ ಮತ್ತಿತರರು ಉಪಸ್ಥಿತರಿದ್ದರು.
‘ರಾಜ್ಯದ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆ’
ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ದೇಶದಲ್ಲೇ ಉತ್ತಮ ವ್ಯವಸ್ಥೆ ಎಂದು ಹೈದರಾಬಾದ್‌ನ ವಿವಿದ್ಯಾನಿಲಯ ತನ್ನ ವರದಿಯಲ್ಲಿ ಹೇಳಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಾವು ರಾಜ್ಯದಲ್ಲಿ ಇಲ್ಲಿಯವರೆಗೆ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಅರ್ಥಿಕ ಭದ್ರತೆಯನ್ನು ಕಾಪಾಡಿದ್ದಾರೆ ಎಂದು ಗೃಹಸಚಿವರು ಹೇಳಿದರು.







