ಹನುಮಸಾಗರ | ಬೆಟ್ಟದ ಮೇಲ್ಭಾಗದಲ್ಲಿ ಯುವಕನ ಮೃತದೇಹ ಪತ್ತೆ

ಹನುಮಸಾಗರ : ಹನುಮಸಾಗರ ಪಟ್ಟಣದ ಸಮೀಪದ ಬೆಟ್ಟದ ಮೇಲ್ಭಾಗದಲ್ಲಿ ಯುವಕನೊರ್ವನ ಮೃತದೇಹ ಇಂದು(ಜ.6) ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೆಟ್ಟದ ಮೇಲ್ಭಾಗದಲ್ಲಿ ಮೃತದೇಹ ಕಂಡುಬಂದಿರುವ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೃತದೇಹ ಸಮೀಪದಲ್ಲೇ ಒಂದು ಮೊಬೈಲ್ ಫೋನ್ ಹಾಗೂ ವಿಷದ ಬಾಟಲಿ ಪತ್ತೆಯಾಗಿದ್ದು, ಸಾವಿನ ಕುರಿತು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತ ಯುವಕನನ್ನು ಸಮೀಪದ ಗುಡ್ಡದೇವಲಾಪೂರ ಗ್ರಾಮದ ನಿವಾಸಿ ಸಂತೋಷ ಹನುಮನಾಳ್ ಎಂದು ಗುರುತಿಸಲಾಗಿದೆ. ಮೃತದೇಹವು ಬಹಳ ದಿನಗಳ ಹಿಂದಿನದಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ಭಾಗಗಳನ್ನು ಬಿಟ್ಟು ಕಾಲುಗಳನ್ನು ಮಾತ್ರ ಪ್ರಾಣಿಗಳು ತಿಂದಿರುವ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಸಾವಿನ ಹಿಂದೆ ಅಪಘಾತ, ಆತ್ಮಹತ್ಯೆ ಅಥವಾ ಇನ್ನಾವುದೇ ಕಾರಣವಿದೆಯೇ ಎಂಬುದು ತನಿಖೆಯ ನಂತರವೇ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







