ಹನುಮಸಾಗರ | ಅಗಲಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಗೆ ನುಡಿನಮನ

ಹನುಮಸಾಗರ (ಕೊಪ್ಪಳ ಜಿಲ್ಲೆ) : ಇಲ್ಲಿಯ ಕನ್ನಡ ಸಾಹಿತ್ಯ ಭವನದಲ್ಲಿ ವೃಕ್ಷ ಮಾತೆ, ಶತಾಯುಷಿ, ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಶ್ರದ್ದಾಂಜಲಿ ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಸಂತಾಪ ಸೂಚಿಸಿ, ನುಡಿನಮನ ಸಲ್ಲಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲೀಕಾರ, ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ್ ಮಾತನಾಡಿ, ಮಕ್ಕಳೇ ಇಲ್ಲದ ತಿಮ್ಮಕ್ಕ ಗಿಡಮರಗಳನ್ನು ಬೆಳೆಸಿ, ಪೋಷಿಸಿ ಅವುಗಳನ್ನೇ ತನ್ನ ಮಕ್ಕಳೆಂಬ ಭಾವನೆಯಿಂದ ಸಂತೃಪ್ತಿ ಹೊಂದಿದ್ದರು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಆಮ್ಲಜನಕ ಕೊರತೆಯಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ. ಮುಂದಿನ ನಮ್ಮ ಪೀಳಿಗೆಗೆ ಆಮ್ಲಜನಕ ಕೊರತೆ ಬರಬಾರದು. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕೆಂದರೆ ಸಾಲುಮರದ ತಿಮ್ಮಕ್ಕ ಅವರ ಮಾರ್ಗದಲ್ಲಿ ನಡೆದು ಸಾವಿರಾರು ಗಿಡಗಳನ್ನು ನೆಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕು. ಅವರು ಅಷ್ಟು ಗಿಡಮರಗಳನ್ನು ನೆಟ್ಟು ಪಾಲನೆ-ಪೋಷಣೆ ಮಾಡಿದ ಪುಣ್ಯವೇ ಅವರನ್ನು 114 ವರ್ಷ ಬಾಳುವಂತೆ ಮಾಡಿದೆ ಎಂದು ತಿಳಿಸಿದರು.
ಕಸಾಪ ಹಿರಿಯರಾದ ಅಬ್ದುಲ್ ಕರೀಮ ಒಂಟೆಳಿ, ಅಬ್ದುಲ್ ರಝಾಕ್ ಟೇಲರ, ಕಸಾಪ ತಾಲೂಕು ಕಸಾಪ ಹೋಬಳಿ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಕಾರ್ಯದರ್ಶಿ ಬಸವರಾಜ ದಟ್ಟಿ, ಶೇಖರಪ್ಪ ಕುರಿ, ಎಂ.ಡಿ. ನಂದವಾಡಗಿ, ಗ್ಯಾನಪ್ಪ ತಳವಾರ ಮತ್ತಿತರರು ಇದ್ದರು.







