ಎಂಎಲ್‌ಸಿ ಎ.ವಸಂತಕುಮಾರ ಅವರನ್ನು ಪರಿಷತ್ ಸ್ಥಾನದಿಂದ ವಜಾಗೊಳಿಸಲು ಹೇಮಲತಾ ನಾಯಕ್ ಆಗ್ರಹ

ಕೊಪ್ಪಳ: ಪರಿಷತ್ ಸದಸ್ಯ ಎ. ವಸಂತಕುಮಾರ ಅವರು ಪರಿಶಿಷ್ಟ ಜಾತಿಯ ಮಾದಿಗ ಮತ್ತು ಛಲವಾದಿ ಎಂದು 2 ಜಾತಿಯ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದು ಹಲವಾರು ಸರ್ಕಾರಿ ಸೌಲಭ್ಯಗಳನ್ನು ಪಡೆದಿದಲ್ಲದೆ ಛಲವಾದಿ ಜನಾಂಗದ ಮೀಸಲಾತಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದು ಈ ಕುರಿತು ಸರ್ಕಾರ ಕೂಲಂಕುಷ ತಿನಿಖೆ ನಡೆಸಿ ಪರಿಷತ್ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಸಂತಕುಮಾರ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿ, ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿರುವುದು ಅಕ್ಷಮ್ಯ ಅಪರಾಧ ವಿಧಾನ ಪರಿಷತ್ ಸದಸ್ಯರಾದ ಎ. ವಸಂತಕುಮಾರ ಇವರು ಮೂಲತಃ ಚನ್ನದಾಸರು ಜನಾಂಗಕ್ಕೆ ಸೇರಿರುವುದು ದಾಖಲೆಗಳಿಂದ ತಿಳಿದುಬಂದಿದೆ. ತದನಂತರದಲ್ಲಿ ಇವರು 1989ನೇ ಸಾಲಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಎಸ್.ಸಿ ಸೌಲಭ್ಯಗಳನ್ನು ಪಡೆಯಲು ಅನರ್ಹರಾಗಿದ್ದಾರೆ.
ಆದರೆ ಎ. ವಸಂತಕುಮಾರ ಇವರು ಜವಹರನಗರ ಗೃಹ ನಿರ್ಮಾಣ ಸಹಕಾರಿ ಸಂಘದಲ್ಲಿ ಮಾದಿಗ ಜನಾಂಗದ ಜಾತಿ ಪ್ರಮಾಣಪತ್ರವನ್ನು ನೀಡಿ 6 ನಿವೇಶನಗಳನ್ನು ಪಡೆದಿರುತ್ತಾರೆ. ಅಲ್ಲದೇ ಇವರು ಬೇರೆ ಬೇರೆ ಹೆಸರುಗಳನ್ನು ಬಳಸಿ ಕರ್ನಾಟಕ ಗೃಹ ಮಂಡಳಿಯ 2 ನಿವೇಶನಗಳನ್ನು ಪಡೆದಿರುತ್ತಾರೆ. ಆದರೆ ಇವರು ಸರ್ಕಾರಕ್ಕೆ ಯಾವುದೇ ನಿವೇಶನಗಳನ್ನು ಹೊಂದಿರುವುದಿಲ್ಲವೆಂದು ಸುಳ್ಳು ದೃಡೀಕರಣ ಪತ್ರವನ್ನು ನೀಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
2014ನೇ ಸಾಲಿನಲ್ಲಿ ರಾಯಚೂರು ಎ.ಪಿ.ಎಂ.ಸಿ ವತಿಯಿಂದ 3 ವರ್ಷ ಉದ್ಯಮ ನಡೆಸಿರುವುದಾಗಿ ಸುಳ್ಳು ಪ್ರಮಾಣಪತ್ರವನ್ನು ಸೃಷ್ಟಿಸಿ, ತನ್ನ ತಾಯಿ ವಾಸಿಸುವ ಮನೆಯಲ್ಲಿ ಜಿನ್ನಿಂಗ್ ಫ್ಯಾಕ್ಟರಿ ನಡೆಸುವುದಾಗಿ ಪ್ರಮಾಣಪತ್ರಗಳನ್ನು ಸಲ್ಲಿಸಿ 2 ಎಕರೆ ನಿವೇಶನವನ್ನು ಪಡೆದಿರುತ್ತಾರೆ. ವಸಂತಕುಮಾರ ಇವರ ತಾಯಿಯ ಹೆಸರು ಮೇರಿಬಾಯಿ ಆದರೆ ಪ್ರಮಾಣ ಪತ್ರಗಳಲ್ಲಿ ಮೀರಾಬಾಯಿ ಎಂದು ಬದಲಾವಣೆ ಮಾಡಿ ತೊಟ್ಟಿ ದಾಖಲೆಗಳನ್ನು ಸೃಷ್ಟಿಸಿರುತ್ತಾರೆ. ಈ ಎಲ್ಲಾ ದಾಖಲೆಗಳನ್ನು ಗಮನಿಸಿದಾಗಿ ವಸಂತಕುಮಾರ ಇವರು ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿರುವುದು ಸಾಬೀತಾಗಿದ್ದು, ಜಾರಿ ನಿರ್ದೇಶನಾಲಯ ಮತ್ತು ರಾಯಚೂರು ಜಿಲ್ಲಾಧಿಕಾರಿಗಳು ಸ್ವಯಂ ಪ್ರೇರಿತವಾದ ದೂರನ್ನು ದಾಖಲಿಸಿಕೊಂಡು ವಿಳಂಬ ಧೋರಣೆಯನ್ನು ಅನುಸರಿಸದೇ ವಸಂತಕುಮಾರ ಇವರು ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿರುವ ಬಗ್ಗೆ ಸಮಗ್ರವಾದ ತನಿಖೆಯನ್ನು ಕೈಗೊಂಡು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಹಾಗೂ ತನಿಖೆ ಮುಕ್ತಾಯವಾಗುವವರೆಗೆ ಎ. ವಸಂತಕುಮಾರ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.







