ನಾನು ಪದವೀಧರ, ಓದು, ಬರಹ ಗೊತ್ತಿಲ್ಲದವನು ಅಲ್ಲ : ಶಿವರಾಜ ತಂಗಡಗಿ

ಕನಕಗಿರಿ: ನಾನು ಬಿಎಸ್‌ಸಿ ಪದವೀಧರ, ಓದು, ಬರಹ ಗೊತ್ತಿಲ್ಲದವನು ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಸಮೀಪದ ತಿಪ್ಪನಾಳ ಗ್ರಾಮದಲ್ಲಿ ಬುಧವಾರ ಪತ್ರಕರ್ತರ ಜತೆಗೆ ಅವರು ಮಾತನಾಡಿದರು.
ಈಚೆಗೆ ಕಾರಟಗಿಯ ಅಂಗನವಾಡಿ ಕಟ್ಟಡ ಉದ್ಘಾಟನೆಯ ಸಮಯದಲ್ಲಿ ನನಗೆ ʼಶುಭವಾಗಲಿʼ ಎಂಬ ಪದ ಬರೆಯಲು ಬರಲಿಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಬರೆದಿದ್ದನ್ನು ನೋಡುವ ಕಿಂಚಿತ್ತೂ ತಾಳ್ಮೆ ಅವರಿಗೆ ಇಲ್ಲ. ಅಪ ಪ್ರಚಾರ ಮಾಡುವುದು ಅವರ ಕಾಯಕವಾಗಿದೆ. ಮಾಧ್ಯಮಗಳು ವಾಸ್ತವಿಕ ಸತ್ಯ ಅರಿತುಕೊಂಡು ಸುದ್ದಿ ಪ್ರಸಾರ ಮಾಡಬೇಕು, ವಿರೋಧಿಗಳೊಂದಿಗೆ ಕೈ ಜೋಡಿಸಬಾರದು ಎಂದು ತಿಳಿಸಿದರು.
12 ವರ್ಷಗಳ ಕಾಲ ಸಚಿವನಾಗಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ತಂಗಡಗಿಯನ್ನು ಟೀಕಿಸಲು ಬೇರೆ ವಿಷಯಗಳು ಇಲ್ಲ ಎಂಬ ಕಾರಣಕ್ಕೆ ಪದವನ್ನು ಹಿಡಿದುಕೊಂಡು ಹತಾಶರಾಗಿ ವಿಡಿಯೋ ವೈರಲ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ, ಇದನ್ನು ಸಹಿಸಿಕೊಳ್ಳಲು ತಮ್ಮ ವಿರೋಧಿಗಳಿಗೆ ಆಗುತ್ತಿಲ್ಲ. ಶುಭವಾಗಲಿ ಎಂಬ ಪದ ಬರೆಯುವಾಗ ಯಾವುದೇ ದೋಷವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.





