ಶ್ರೇಷ್ಠ ವಿಚಾರ ಇಸ್ಲಾಂನಲ್ಲಿದೆ ಎಂದು ಹೇಳಿದ್ದೇನೆಯೇ ಹೊರತು ಇತರ ಧರ್ಮಗಳು ಕಡಿಮೆ ಅಂದಿಲ್ಲ: ಬಸವರಾಜ ರಾಯರೆಡ್ಡಿ

ಬಸವರಾಜ ರಾಯರಡ್ಡಿ
ಕೊಪ್ಪಳ: ಶ್ರೇಷ್ಠ ವಿಚಾರ ಇಸ್ಲಾಂನಲ್ಲಿದೆ ಎಂದು ಹೇಳಿದ್ದೇನೆಯೇ ಹೊರತು ಇತರ ಧರ್ಮಗಳು ಕಡಿಮೆ ಅಂತ ಹೇಳಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
"ಇತರ ಧರ್ಮಗಳಿಂದ ಇಸ್ಲಾಂ ಧರ್ಮ ಶ್ರೇಷ್ಠ" ಎಂದು ಸಚಿವ ಬಸವರಾಜ ರಾಯರೆಡ್ಡಿ ನೀಡಿದ್ದರೆನ್ನಲಾದ ಹೇಳಿಕೆಯನ್ನು ವಿಪಕ್ಷಗಳು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಎಲ್ಲ ಧರ್ಮ ಶ್ರೇಷ್ಠ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ?, ನಾನು ಯಾವುದೆ ಧರ್ಮಕ್ಕೆ ಸೇರಿದವನಲ್ಲ, ನನಗೆ ಯಾವುದೆ ಧರ್ಮ ಇಲ್ಲ, ಒಂದು ವೇಳೆ ನಾನು ಹಾಗೇ ಹೇಳಿದ್ರೆ ತಪ್ಪೇನಿದೆ, ಅಲ್ಲಿ ಹೋದಾಗ ಸಾಂದರ್ಭಿಕವಾಗಿ ಮಾತನಾಡ್ತೀವಿ" ಎಂದು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ಹಜ್ ಹೋಗೊಕೆ ಆಗುತ್ತಿಲ್ಲ ಅಂತ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ನಾನು ಮಠ ಮಾನ್ಯಗಳಿಗೆ ಹೋಗಲ್ಲ, ಆದರೆ ಜೊತೆಗೆ ಇದ್ದವರು ಮತ್ತು ನನ್ನ ಪತ್ನಿ, ಮಕ್ಕಳ ಕರೀತಾರೆ ಅಂತ ಹೋಗ್ತಿನಿ, ಇಸ್ಲಾಂ ಧರ್ಮದಲ್ಲಿ ಒಳ್ಳೆಯ ವಿಚಾರ ಇದೆ ಅಂತ ಹೇಳಿದ್ದೇನೆ, ನಾನು ಇಸ್ಲಾಂ, ಕ್ರೈಸ್ತ, ಯಹೂದಿ ಧರ್ಮದ ಬಗ್ಗೆ ಕೂಡಾ ಅಧ್ಯಯನ ಮಾಡ್ತಿನಿ. ನಾನು ಏಸು ಕ್ರಿಸ್ತನ ಸಮಾಧಿ ಬಳಿಯೂ ಹೋಗಿ ಬಂದಿದ್ದೇನೆ, ಎಲ್ಲಾ ಧರ್ಮದ ಪವಿತ್ರ ಸ್ಥಳಗಳಿಗೂ ಹೋಗಿದ್ದೇನೆ. ನಾವು ಯಾವುದೆ ಧರ್ಮವನ್ನು ಅನುಸರಿಸುವವನಲ್ಲ'' ಎಂದು ಬಸವರಾಜ ರಾಯರೆಡ್ಡಿ ಹೇಳಿದರು.






