ಕೊಪ್ಪಳವನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ: ಸಿವಿ ಚಂದ್ರಶೇಖರ್ ಆಗ್ರಹ

ಕೊಪ್ಪಳ: ಕೊಪ್ಪಳ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿವಿ ಚಂದ್ರಶೇಖರ್ ಆಗ್ರಹಿಸಿದರು.
ಜೆಡಿಎಸ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ರೈತರ ಪ್ರತಿಭಟನೆ ಹಾಗೂ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಲ್ಲೇ ಅತ್ಯಂತ ತೀವ್ರ ಬರಗಾಲ ಈ ವರ್ಷ ಎದುರಾಗಿದೆ. ಲಭ್ಯವಿರುವ ಕೃಷಿ ಭೂಮಿಯಲ್ಲಿ ಕೇವಲ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದ್ದು, ವಾಡಿಕೆಗಿಂತ ಶೇ.47ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವರು ಆತ್ಮಹತ್ಯೆಯಂತಹ ಅತಿರೇಕದ ನಿರ್ಧಾರಗಳಿಗೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಿದರೆ ಮಾತ್ರ ಪರಿಹಾರ ನಿಧಿ ಬಿಡುಗಡೆ ಸಾಧ್ಯವಾಗುತ್ತದೆ. ಬರ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 175 ಕೋಟಿ ರೂ. ಲಭ್ಯವಿದೆ ಎಂದು ಸರ್ಕಾರವೇ ಹೇಳಿರುವಾಗಲೂ ಘೋಷಣೆ ಮಾಡಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹಾಗೂ ಸ್ಥಳೀಯ ಶಾಸಕರು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಕೊಪ್ಪಳವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಸಾಧ್ಯವಾಗದಿದ್ದರೆ ಅವರು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.
ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 30,000 ರೂ. ಪರಿಹಾರ ನೀಡಬೇಕು. ಕಾಮಧೇನು ಹಾಗೂ ಅನುಗ್ರಹ ಯೋಜನೆಗಳಡಿ ಜಾನುವಾರು ಮೃತಪಟ್ಟ ರೈತರಿಗೆ ಸರ್ಕಾರ ನೀಡಬೇಕಿರುವ 62 ಕೋಟಿ ರೂ. ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಸುಮಾರು 58 ಸಾವಿರ ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದು, ಅವರ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತರು ಖಾಲಿ ಕೊಡಗಳು ಹಾಗೂ ಒಣಗಿದ ಬೆಳೆಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ವಿರೇಶಗೌಡ್ರ ದಳಪತಿ, ತಾಲೂಕು ಎಸ್ ಸಿ ಘಟಕದ ಅಧ್ಯಕ್ಷ ಸುರೇಶ ದದಗಲ್, ತಾಲೂಕು ಎಸ್ ಟಿ ಘಟಕದ ಅಧ್ಯಕ್ಷ ಮಲ್ಲಪ್ಪ ಹಂದ್ರಾಳ್, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಿರಾಜ್ ಬಿಜಾಪುರ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ, ನಗರ ಘಟಕ ಉಪಾಧ್ಯಕ್ಷ ಗಂಗಾಧರ ವಸ್ತ್ರದ, ನಗರ ಘಟಕ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ಉಪಾಧ್ಯಕ್ಷೆ ಶರಣಮ್ಮ, ನಗರ ಘಟಕ ಮಹಿಳಾ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ಸೇರಿದಂತೆ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.






