ಬಲ್ಡೋಟಾ ಕಾರ್ಖಾನೆ ಕುರಿತು ಬೇಜವಾಬ್ದಾರಿ ಹೇಳಿಕೆ : ಸಚಿವ ಎಂ.ಬಿ.ಪಾಟೀಲ್ ವಜಾಕ್ಕೆ ಆಗ್ರಹ

ಕೊಪ್ಪಳ, ಆ.23: ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಎಸ್‌ಪಿಎಲ್ ಕಾರ್ಖಾನೆ ವಿಸ್ತರಣೆ ಕುರಿತಾಗಿ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾಮಾಡಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಪ್ರತಿಭಟಿಸಿ ಆಗ್ರಹಿಸಿತು.
ನಗರದ ಅಶೋಕ ವೃತ್ತದಲ್ಲಿ ಹೋರಾಟಗಾರರು ಜಮಾಯಿಸಿ ಸರ್ಕಾರದ ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಕೊಪ್ಪಳ ಬಸಾಪುರ ಕೆರೆಯನ್ನು ಎಂಎಸ್‌ಪಿ ಎಲ್ ಕಾರ್ಖಾನೆ ಮಾಡಿದ ಅತಿಕ್ರಮಣದಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ, ಸರಕಾರ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ? ಬಿಎಸ್‌ಪಿಎಲ್ ಕಾರ್ಖಾನೆ ವಿಸ್ತರಣೆಯ ಕುರಿತಾದ ಮುಖ್ಯಮಂತ್ರಿಯವರ ತಡೆಯಾಜ್ಞೆ ಯಾಕೆ ಜಾರಿಗೆ ಬಂದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಬೇಜವಾಬ್ದಾರಿಯಿಂದ ಹೇಳಿಕೆ ಕೊಟ್ಟಿದ್ದನ್ನು ಆತಂಕದಿಂದ ಕೊಪ್ಪಳದ ಜನತೆ ಖಂಡಿಸುತ್ತೇವೆ.
ವಿಸ್ತರಣೆಗೆ ಶಾಶ್ವತತಡೆ ಆದೇಶಕ್ಕಾಗಿ ಜನರು ಕಾದು ನಿರಂತರ ಹೋರಾಡುತ್ತಿರುವಾಗಲೇ, ಬಿಎಸ್‌ಪಿಎಲ್ ವಿಸ್ತರಣೆ ನಿಲ್ಲುವುದಿಲ್ಲವೆಂದು, ಕಾರ್ಖಾನೆ ವಿಸ್ತರಣೆ ಆರಂಭಿಕ ಚಟುವಟಿಕೆ ನಡೆಸುತ್ತಿದೆ ಎಂದು ಕೇಂದ್ರ ಸರಕಾರದ ಕಡೆಗೆ ಬೆಟ್ಟುಮಾಡಿ ಅಸಡ್ಡೆಯ ಉತ್ತರ ನೀಡುವ ಮೂಕವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವರು ಕೊಡುವ ಮೂಲಕ ಮುಖ್ಯಮಂತ್ರಿಯವರ ತಡೆ ಆದೇಶಕ್ಕೆ ಮತ್ತು ಸರಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ಡಿ. ಎಂ. ಬಡಿಗೇರ, ಮುದುಕಪ್ಪ ಹೊಸಮನಿ, ಎಸ್. ಎ. ಗಫಾರ್, ಶಿವಪ್ಪ ಹಡಪದ, ರವಿ ಕಾಂತನವರ, ಮಂಗಳೇಶ ರಾಠೋಡ, ಹನುಮಂತಪ್ಪ ಗೊಂದಿ, ಶಾಂತಪ್ಪ ಅಂಗಡಿ, ಎಂ.ಡಿ. ಪಾಟೀಲ, ಶಂಭುಲಿಂಗಪ್ಪ ಹರಗೇರಿ, ಹನುಮಪ್ಪ ಕಟಗಿ, ಬಂದೇನವಾಜ ಮನಿಯಾರ, ಸುಂಕಪ್ಪ ಮೀಸಿ, ಯಮನೂರಪ್ಪ, ಸುಂಕಮ್ಮ ಇತರರು ಇದ್ದರು.







