ಬಾಲ್ಯ ವಿವಾಹದಲ್ಲಿ ಭಾಗಿಯಾದರೆ ಜೈಲು ಗ್ಯಾರಂಟಿ: ಎಎಸ್‌ಪಿ ಹೇಮಂತಕುಮಾರ

ಕನಕಗಿರಿ: ಬಾಲ್ಯ ವಿವಾಹ ಕಾನೂನು ವಿರೋಧಿಯಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆಯನ್ನು ಮಾಡಿದವರು, ಭಾಗವಹಿಸಿದವರು ಹಾಗೂ ಇಂಥ ವಿವಾಹಕ್ಕೆ ಪ್ರೋತ್ಸಾಹಿಸಿದವರು ಬಾಲ್ಯ ವಿವಾಹ ನಿಷೇಧ ಕಾಯ್ದೆ ವ್ಯಾಪ್ತಿಯಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತಕುಮಾರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಸಹಯೋಗದಲ್ಲಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಗುರುವಾರ ನಡೆದ “ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಲ್ಯ ವಿವಾಹ ಕಾಯ್ದೆ ವ್ಯಾಪ್ತಿಯಲ್ಲಿ ಸಿಲುಕಿ ಜೈಲು ವಾಸ ಅನುಭವಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ವಸತಿ ನಿಲಯಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು, ಮಗುವಿಗೆ ಜನ್ಮ ನೀಡಿದ ಪ್ರಕರಣಗಳು ವರದಿಯಾಗಿವೆ. ಇಂಥ ಅಮಾನವೀಯ ಘಟನೆಗಳು ಸಮುದಾಯಗಳಲ್ಲಿ ಜಾಗೃತಿ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ವಿಷಾದಿಸಿದರು. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮೀಕ್ಷೆ-4 ರಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾದವರ ಪ್ರಮಾಣ ಜಿಲ್ಲೆಯಲ್ಲಿ ಶೇ. 35.9ರಷ್ಟು ಹಾಗೂ ಸಮೀಕ್ಷೆ- 5ರಲ್ಲಿ ಶೇ. 27ರಷ್ಟು ಇದ್ದರೂ ರಾಜ್ಯದಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುವ ಜಿಲ್ಲೆಗಳಲ್ಲಿ ಕೊಪ್ಪಳ ಒಂದಾಗಿದೆ ಇದು ಜಿಲ್ಲೆಗೆ ಕೆಟ್ಟ ಹೆಸರು ತರುವಂತದ್ದು ಎಂದರು. ಬಾಲ್ಯ ವಿವಾಹದ ಹಲವಾರು ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದ್ದರೂ ಮತ್ತೆ ಮರುಕಳಿಸುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಬಾಲ್ಯ ವಿವಾಹದ ದುಷ್ಪರಿಣಾಮದ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಬಾಲ್ಯ ವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸಿ, ಬಾಲ್ಯವಿವಾಹ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.
ಬಾಲ್ಯ ವಿವಾಹ ಕುರಿತು ಜಾಗೃತಿ, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಮುದಾಯ ಮತ್ತು ಪಾಲಕರ ಜವಾಬ್ದಾರಿ ಸಹ ಮುಖ್ಯವಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜತೆಗೆ ಕೈಜೋಡಿಸಬೇಕೆಂದು ತಿಳಿಸಿದರು.
ಡಿವೈಎಸ್ ಪಿ ಜೆ ಎಸ್ ನ್ಯಾಮಗೌಡ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರ್ಕಾರವು ವಿವಿಧ ಕಾನೂನುಗಳನ್ನು ಜಾರಿಗೆ ತಂದಿದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಪ್ರಮುಖವಾಗಿದೆ ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ದೊಡ್ಡೇಶ ಎಲಿಗಾರ, ಮಾತನಾಡಿದ ಬೇಡವಾದ ಮಗುವನ್ನು ಎಲ್ಲೆಡೆ ಬಿಸಾಕದೆ ಇಲಾಖೆ ಸುಪರ್ದಿಗೆ ನೀಡಬೇಕೆಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಪನ್ಮೂಲ ವ್ಯಕ್ತಿ ಶಿವಲೀಲಾ ವನ್ನೂರು ಮಾತನಾಡಿ 18 ವರ್ಷದೊಳಗಿನ ಮಕ್ಕಳು ಮಾದಕ ವ್ಯಸನಿಗಳಾಗುವುದು, ವಾಹನ ಪರವಾನಿಗೆ ಇಲ್ಲದೆ ಅಸುರಕ್ಷಿತವಾಗಿ ವಾಹನ ಚಾಲನೆ ಮಾಡಿ ಅಪಘಾತಗಳನ್ನು ಮಾಡುತ್ತಿರುವುದು ಕಂಡು ಬಂದಿದೆ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುಪಾಕ್ಷ ಸ್ವಾಮಿ ಮಾತನಾಡಿದರು. ಪಿಐ ನಾರಾಯಣ ವಿ, ತಾಪಂ ಎಡಿ ನಾಗೇಶ, ಮೇಲ್ವಿಚಾರಕಿ ಚಂದ್ರಕಲಾ ಚಿಂದಿ, ಪಿಡಿಒ ಬಸವರಾಜ ಸಂಕನಾಳ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪರಶುರಾಮ ವಜ್ರಬಂಡಿ, ಮುಖ್ಯ ಶಿಕ್ಷಕ ಧರ್ಮಣ್ಣ , ಶಿವಪ್ಪ ಸುಳೇಕಲ್, ವಿಶ್ವನಾಥ ಖ್ಯಾಡೆದ ಇದ್ದರು. ಪ್ರತಿಭಾ ಕಾಶಿಮಠ ನಿರೂಪಿಸಿದರು. ಶರಣಪ್ಪ ಸಿಂಗನಾಳ ವಂದಿಸಿದರು.






