'ಝೆಡ್' ಶ್ರೇಣಿ ಭದ್ರತೆ ಒದಗಿಸಲು ಆಗ್ರಹಿಸಿ ಜನಾರ್ದನ ರೆಡ್ಡಿಯಿಂದ ಮುಖ್ಯಮಂತ್ರಿ, ಕೇಂದ್ರ ಗೃಹಸಚಿವರಿಗೆ ಪತ್ರ

ಜನಾರ್ದನ ರೆಡ್ಡಿ
ಕೊಪ್ಪಳ: ತನಗೆ 'ಝೆಡ್' ಶ್ರೇಣಿಯ ಭದ್ರತೆ ಒದಗಿಸಲು ಆಗ್ರಹಿಸಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಅತ್ಯಂತ ಆಘಾತ ಮತ್ತು ಆಕ್ರೋಶದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ತಿಳಿಸಿರುವ ಜನಾರ್ದನ ರೆಡ್ಡಿ, ಜ.1 ಹೊಸ ವರ್ಷದ ದಿನದಂದೇ ಬಳ್ಳಾರಿಯ ನನ್ನ ನಿವಾಸದ ಮೇಲೆ ಭೀಕರ ದಾಳಿ ನಡೆದಿದೆ. ಇದು ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ. ಬದಲಾಗಿ, ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಗೂಂಡಾ ಪಡೆಯು ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿದ ಪೂರ್ವನಿಯೋಜಿತ 'ಹತ್ಯೆಯ ಸಂಚು' (Assassination Attempt) ಇದಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ 'ಝಡ್' (Z Category) ಅಥವಾ ಅದಕ್ಕೆ ಸಮಾನವಾದ ಉನ್ನತ ಪೊಲೀಸ್ ಭದ್ರತೆ ಒದಗಿಸಬೇಕು. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಮತ್ತು ಪೆಟ್ರೋಲ್ ಬಾಂಬ್ ಬಳಸಿದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಸಹಚರರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ನನಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸರಕಾರ ವಿಫಲವಾಗಿ, ಮುಂದಿನ ದಿನಗಳಲ್ಲಿ ನನ್ನ ಅಥವಾ ನನ್ನ ಕುಟುಂಬದ ಮೇಲೆ ಯಾವುದೇ ದಾಳಿ ನಡೆದರೆ, ಅದಕ್ಕೆ ನೇರವಾಗಿ ರಾಜ್ಯ ಸರಕಾರವೇ ಹೊಣೆಯಾಗುತ್ತದೆ ಎಂದು ಈ ಮೂಲಕ ಎಚ್ಚರಿಸ ಬಯಸುತ್ತೇನೆ ಎಂದು ಸಿಎಂ ಗೆ ಬರೆದಿರುವ ಪತ್ರದಲ್ಲಿ ಜನಾರ್ದನ ರೆಡ್ಡಿ ಉಲ್ಲೇಖಿಸಿದ್ದಾರೆ.
ನಾನು ಬಿಜೆಪಿಯಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದ್ದೇನೆ. ಬಿಜೆಪಿಗೆ ದೊರೆಯುತ್ತಿರುವ ಜನಬೆಂಬಲ ಹಾಗೂ ನನ್ನ ಮೇಲಿನ ಜನರ ವಿಶ್ವಾಸ ಕಾಂಗ್ರೆಸ್ ಪಕ್ಷಕ್ಕೆ, ವಿಶೇಷವಾಗಿ ಬಳ್ಳಾರಿ ಕ್ಷೇತ್ರದ ಪ್ರಸಕ್ತ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿಯವರಿಗೆ ಭಾರೀ ಆತಂಕವನ್ನುಂಟುಮಾಡಿದೆ. ಕಾಂಗ್ರೆಸ್ ಪಕ್ಷದೊಳಗೆ ಹಾಗೂ ಅದರ ಕಾರ್ಯಕರ್ತರ ನಡುವೆ ಉಂಟಾಗುತ್ತಿರುವ ಬಿರುಕುಗಳನ್ನು ಮುಚ್ಚಿಕೊಳ್ಳಲು ನನ್ನನ್ನೇ ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹಸಚಿವರಿಗೆ ಬರೆದ ಪತ್ರದಲ್ಲಿ ಜನಾರ್ದನ ರೆಡ್ಡಿ ಪತ್ರದಲ್ಲಿ ಆರೋಪಿಸಿದ್ದಾರೆ.
2026ರ ಜನವರಿ 1 ರಂದು ಬಳ್ಳಾರಿ ಕ್ಷೇತ್ರದ ಪ್ರಸಕ್ತ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ತಮ್ಮ ಗೂಂಡಾ ಪಡೆಗಳನ್ನು ಸೇರಿಸಿಕೊಂಡು, ಮಾರಕ ಆಯುಧಗಳು, ಆಸಿಡ್ ಬಾಟಲಿಗಳು ಹಾಗೂ ಇತರ ಅಪಾಯಕಾರಿ ಸಾಧನಗಳೊಂದಿಗೆ ನನ್ನ ನಿವಾಸದ ಎದುರಲ್ಲೇ ನನ್ನನ್ನು ಗುರಿಯಾಗಿಸಿ ದಾಳಿ ನಡೆಸಿದರು. ಆದರೆ ಈ ಗುಂಡಿನ ದಾಳಿಯಿಂದ ರಾಜಶೇಖರ್ ಎಂಬವರು ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿದ್ದಾರೆ. ಇದು ಇತ್ತೀಚೆಗೆ ನಡೆದ ಅತ್ಯಂತ ಗಂಭೀರ ಘಟನೆ ಆಗಿದ್ದು, ನನ್ನ ಪ್ರಾಣಕ್ಕೆ ಭಾರೀ ಅಪಾಯವಿರುವುದಾಗಿ ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಪ್ರಸಕ್ತ ರಾಜ್ಯವನ್ನು ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಅವರ ನಿಯಂತ್ರಣದಲ್ಲಿದೆ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಸ್ಥಿತಿ ಅತ್ಯಂತ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ತಮ್ಮ ರಾಜಕೀಯ ಮೇಲಧಿಕಾರಿಗಳ ಸೂಚನೆಗಳಿಗೆ ಬದ್ಧವಾಗಿರುವ ಕಾರಣ ನನ್ನ ಜೀವ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಜನಾರ್ದನ ರೆಡ್ಡಿ ಉಲ್ಲೇಖಿಸಿದ್ದಾರೆ.
ಭಾರತ ಸಂವಿಧಾನದ ಕಲಂ 21ರ ಅಡಿಯಲ್ಲಿ ನನಗೆ ಜೀವಿಸುವ ಹಾಗೂ ನನ್ನ ಜೀವವನ್ನು ರಕ್ಷಿಸಿಕೊಳ್ಳುವ ಮೂಲಭೂತ ಹಕ್ಕು ಇದೆ. ಆದರೆ ರಾಜ್ಯ ಸರಕಾರ ನನ್ನ ಜೀವದ ಭದ್ರತೆಯನ್ನು ಒದಗಿಸಲು ವಿಫಲವಾಗಿದೆ. ಆದ್ದರಿಂದ, ನನ್ನ ಜೀವ ರಕ್ಷಣೆಗೆ ತಕ್ಷಣವೇ ಕೇಂದ್ರ ಸಶಸ್ತ್ರ ಪಡೆಗಳ ಮೂಲಕ ಭದ್ರತೆ ಒದಗಿಸಬೇಕೆಂದು ನಾನು ಸಂಬಂಧಿತ ಅಧಿಕಾರಿಗಳನ್ನು ಗೌರವಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.







