ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿಗಾಗಿ ಜಾಥಾ : ತಾಹೀರ್ ಹುಸೇನ್

ಕೊಪ್ಪಳ : ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ಅ.6 ರಿಂದ 13ರವರೆಗೆ ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ ಆಯೋಜಿಸಲಾಗಿದೆ ಎಂದು ನ್ಯಾ.ತಾಹೇರ್ ಹುಸೇನ್ ಅವರು ಹೇಳಿದರು.
ಮಂಗಳವಾರದಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಜಾಥಾ ಬಳ್ಳಾರಿ ಯಿಂದ ಆರಂಭವಾಗಿ ಬೀದರ್ ವರೆಗೆ ನಡೆಯಲಿದ್ದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ಕಲ್ಯಾಣ ಕರ್ನಾಟಕ ಭಾಗ ಇಂದು ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ, ಸಂವಿಧಾನದ 98ನೇ ತಿದ್ದುಪಡಿ ಮೂಲಕ 2013 ರಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದರೂ, ಮತ್ತು ಒಂದು ವಿಶೇಷ ನಿಗಮ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ’ಯ ಹೆಸರಿನಲ್ಲಿ ಸ್ಥಾಪಿಸಿ ಸುಮಾರು 25,000 ಕೋಟಿ ರೂ. ಅನುದಾನ ಕಳೆದ 12 ವರ್ಷಗಳಲ್ಲಿ ಬಿಡುಗಡೆಯಾದರೂ, ಅಭಿವೃದ್ಧಿ ಫಲಿತಾಂಶಗಳು ಜನರ ಕೈ ಸೇರುವಂತಾಗಿಲ್ಲ ಎಂದು ಹೇಳಿದರು.
ಕಾರ್ಮಿಕರು ಕೆಲಸ ಹೊಡುಕಿಕೊಂಡು ಗುಳೇ ಹೋಗುವುದು ತಪ್ಪಲಿಲ್ಲ, ಯುವಕರಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳು ಸ್ಥಾಪನೆ ಯಾಗಿಲ್ಲ, ಅಪೌಷ್ಠಿಕತೆ ಯಿಂದ ಮಕ್ಕಳ ಹಾಗು ಬಾಣಂತಿಯರ ಸಾವಿನ ಸರಣಿ ನಿಲ್ಲಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ನೆಲೆಸುವ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಮತ್ತು ಅದಿವಾಸಿಗಳಿಗೆ ಇನ್ನು ಸಾಮಾಜಿಕ ನ್ಯಾಯ ದೊರಕಲಿಲ್ಲ, ಪ್ರತಿ ಬಾರಿ ಹೊಸ ಯೋಜನೆಗಳ ಭರವಸೆ ದೊಡ್ಡ ದೊಡ್ಡ ಅನುದಾನಗಳು ಘೋಷಣೆ ಆಗುತ್ತದೆ. ಆದರೆ. ಎಲ್ಲಿ ಹೋಗುತ್ತಿದೆ ಆ ಅನುದಾನ ಯಾರಿಗೆ ತಲುಪುತ್ತಿದೇ ಎನ್ನುವುದು ಪ್ರಶ್ನೆಯಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್, ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಇನ್ನಿತರರು ಉಪಸ್ಥಿತರಿದ್ದರು.







