ಕೆ. ರೇಖಾ ಉಪ್ಪಾರಗೆ ಚಿನ್ನದ ಪದಕ; ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ

ಕಾರಟಗಿ : ಕಡು ಬಡತನದ ನಡುವೆಯೂ ಓದುವ ಛಲವನ್ನು ಮುನ್ನಡೆಸಿದ ರೇಖಾ ಉಪ್ಪಾರ ಅವರು ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಕೆ.ರೇಖಾ ಪರಶುರಾಮ, ಕರ್ನಾಟಕ ರಾಜ್ಯವಿಜಯಪುರದ ಅಕ್ಕಮಹಾದೇವಿ ಮಹಿಳಾವಿಶ್ವವಿದ್ಯಾನಿಲಯದಿಂದ ನಡೆಸಿದ 2024-25ನೇ ಸಾಲಿನ ಅಂತಿಮ ಬಿಕಾಂ ಪರೀಕ್ಷೆಯಲ್ಲಿ ಒಟ್ಟು ಶೇ. 95.06ರಷ್ಟು ಅಂಕ ಗಳಿಸುವ ಮೂಲಕ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಗಳಿಸಿ ತಾಲೂಕಿಗೆ ಕೀರ್ತಿತಂದಿದ್ದಾರೆ.
ವಿದ್ಯಾರ್ಥಿನಿಯ ತಂದೆ ಪರಶುರಾಮ ಕೂಲಿಕಾರ್ಮಿಕನಾಗಿದ್ದು, ಮೂವರು ಹೆಣ್ಣುಮಕ್ಕಳನ್ನು ಓದಿಸುತ್ತ ದೈನಂದಿನ ಬದುಕು ಕಟ್ಟಿಕೊಂಡಿದ್ದಾರೆ. ಇತ್ತ ವಿದ್ಯಾರ್ಥಿನಿ, ಬಡತನದ ಸವಾಲುಗಳ ನಡುವೆಯೇ ನಿರಂತರ ಅಧ್ಯಯನ, ಕ್ರಿಯಾಶೀಲ ಚಟುವಟಿಕೆಗಳಿಂದಾಗಿ ಕಾಲೇಜಿನಲ್ಲಿ ಮೆಚ್ಚಿನ ವಿದ್ಯಾರ್ಥಿಯಾಗಿದ್ದುಕೊಂಡು, ಪರಿಶ್ರಮದ ಗುರಿಯನ್ನು ತಲುಪಿದ್ದಾಳೆ.
ಬಡತನದ ಮದ್ಯೆ ನಿರಂತರ ಅಧ್ಯಯನ, ಉಪನ್ಯಾಸಕರ ಹಾಗೂ ಮನೆಯವರ ಮಾರ್ಗದರ್ಶನದಿಂದ ಗುರಿ ಸಾಧಿಸಲು ಸಾಧ್ಯವಾಗಿದೆ.
-ಕೆ.ರೇಖಾ ಪರಶುರಾಮ







