Kanakagiri | ನಿವೇಶನ ಒತ್ತುವರಿ ದೌರ್ಜನ್ಯಕ್ಕೆ ಬೇಸತ್ತು ವಿಷ ಸೇವಿಸಿದ್ದ ಮಾಲಕ ಚಿಕಿತ್ಸೆ ಫಲಿಸದೆ ಮೃತ್ಯು

ಕನಕಗಿರಿ: ಸ್ವಂತ ನಿವೇಶನ ಒತ್ತುವರಿ ತೆರವುಗೊಳಿಸುವಂತೆ ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ನಿವೇಶನ ಒತ್ತುವರಿ ಮಾಡಿಕೊಂಡವರಿಂದ ದೌರ್ಜನ್ಯ ಹಾಗೂ ಜೀವ ಬೆದರಿಕೆ ಎದುರಿಸಿದ್ದ ಮಾಲಕ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಪಟ್ಟಣದ 5ನೇ ವಾರ್ಡ್‌ನಲ್ಲಿ ರವಿವಾರ ನಡೆದಿದೆ.
ಮೃತರನ್ನು ಬಸವರಾಜರೆಡ್ಡಿ ಮಾದಿನಾಳ (40) ಎಂದು ಗುರುತಿಸಲಾಗಿದೆ. ಅವರು ಸರ್ವೇ ನಂ.5ರಲ್ಲಿರುವ ತಮ್ಮ ಸ್ವಂತ ನಿವೇಶನವನ್ನು ಖಾಲಿಯಾಗಿ ಬಿಟ್ಟಿದ್ದರು. ಪಕ್ಕದ ಜಮೀನಿನ ಮಾಲಕರಾದ ಮಹಾಬಲಸಾಬ್ ಬಿಳೇಕುದುರಿ, ಹುಸೇನಸಾಬ್, ದಾದಾಪೀರ್, ಶಹಾಬುದ್ದೀನ್ ಖಾಜಾ ಸೇರಿದಂತೆ ಕೆಲವರು ನಿವೇಶನಕ್ಕೆ ಸಂಬಂಧಿಸಿದಂತೆ ಮನೆಗೆ ನುಗ್ಗಿ ದೌರ್ಜನ್ಯ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾಗ ಬಿಟ್ಟುಕೊಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನಿವೇಶನದ ಒತ್ತುವರಿ ತೆರವುಗೊಳಿಸುವಂತೆ ಬಸವರಾಜರೆಡ್ಡಿ ಅವರು ಪೊಲೀಸ್ ಠಾಣೆ ಹಾಗೂ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹಿಂದೇಟು ಹಾಕಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆ.11 ಮತ್ತು 12ರಂದು ಆರೋಪಿಗಳು ಸಂಜೆ ವೇಳೆ ಅಕ್ರಮವಾಗಿ ಗುಂಪುಗೂಡಿ ಬಂದು ದೌರ್ಜನ್ಯ ನಡೆಸಿದ್ದರು. ಈ ಕುರಿತು ಪೊಲೀಸರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಮೃತರ ಪತ್ನಿ ರಾಧಿಕಾ ಆರೋಪಿಸಿದ್ದಾರೆ. ಆರೋಪಿಗಳು ‘ನಿನ್ನ ಹೆಂಡತಿ, ಮಕ್ಕಳನ್ನು ಸರ್ವನಾಶ ಮಾಡುತ್ತೇವೆ’ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಮಾನಸಿಕವಾಗಿ ನೊಂದಿದ್ದ ಬಸವರಾಜರೆಡ್ಡಿ ಅವರು ಆ.15ರಂದು ಬೆಳಗ್ಗೆ 11ರ ಸುಮಾರಿಗೆ ತಮ್ಮ ಜಮೀನಿಗೆ ತೆರಳಿ ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದೆ.
ವಿಷ ಸೇವಿಸಿರುವುದು ಗೊತ್ತಾದ ಸ್ನೇಹಿತರು ಅವರನ್ನು ಕೂಡಲೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವರಾಜರೆಡ್ಡಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದರೆ ತಮ್ಮ ಪತಿ ಬದುಕುಳಿಯುತ್ತಿದ್ದರು ಎಂದು ರಾಧಿಕಾ ಆರೋಪಿಸಿದರು. ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಾನಸಿಕ ಹಿಂಸೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕಣ್ಣೀರಿಟ್ಟು ಮನವಿ ಮಾಡಿದರು.
ಮೃತರ ಮೃತದೇಹವನ್ನು ಪಟ್ಟಣಕ್ಕೆ ಬರುವ ಮೊದಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಮೃತದೇಹದೊಂದಿಗೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು. ಆರೋಪಿಗಳ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳಿದ್ದರೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಬಂಧಿಸುವವರೆಗೂ ಮೃತ ಸಂಸ್ಕಾರ ಮಾಡುವುದಿಲ್ಲ ಎಂದು ಮುಖಂಡ ಅಯ್ಯನಗೌಡ ಅಳ್ಳಳ್ಳಿ ಹೇಳಿದರು.
ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ವಿಷ ಸೇವಿಸಿ ಸಾವನ್ನಪ್ಪಿರುವ ಪ್ರಕರಣದ ತನಿಖೆ ನಡೆಯುತ್ತಿದೆ. ಸಿಡಿಆರ್, ಸಿಸಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮೃತರ ಪತ್ನಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು.
-ವಿ. ನಾರಾಯಣ, ಪಿಐ ಕನಕಗಿರಿ






