Kanakagiri | ಕುರಿ ಕಾಯಲು ತೆರಳಿದ್ದ ಇಬ್ಬರು ಕುರಿಗಾರರ ಮೇಲೆ ಕರಡಿ ದಾಳಿ

ಕನಕಗಿರಿ: ಕುರಿ ಕಾಯಲು ತೆರಳಿದ್ದ ಇಬ್ಬರು ಯುವ ಕುರಿಗಾರರ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಸೋಮವಾರ ತಾಲೂಕಿನ ಬಸರಿಹಾಳ ಗ್ರಾಮದ ಸಮೀಪದ ಗುಡ್ಡ ಪ್ರದೇಶದಲ್ಲಿ ನಡೆದಿದೆ.
ಗಾಯಾಳುಗಳನ್ನು ಬಸರಿಹಾಳ ಗ್ರಾಮದ ಯಮನೂರ ಯಂಕಪ್ಪ ಯಾದವ ಹಾಗೂ ಹನುಮೇಶ ಮಾರೆಪ್ಪ ಬಿಲಕಂಟಿ ಎಂದು ಗುರುತಿಸಲಾಗಿದೆ.
ಕುರಿಗಳನ್ನು ಮೇಯಿಸಲು ತೆರಳಿದ್ದ ವೇಳೆ ಏಕಾಏಕಿ ಕರಡಿ ದಾಳಿ ನಡೆಸಿದ್ದು, ಇಬ್ಬರಿಗೂ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ.
ಗಾಯಾಳುಗಳಿಗೆ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಎಂ.ಡಿ. ಸುಲೇಮಾನ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆಯ ಮನವಿ :
ಈ ಭಾಗದಲ್ಲಿ ಕರಡಿ ಹಾಗೂ ಚಿರತೆಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ ಮನವಿ ಮಾಡಿದ್ದಾರೆ.
ಕರಡಿಗಳು ತಮ್ಮ ಮರಿಗಳೊಂದಿಗೆ ಸಂಚರಿಸುವ ಸಂದರ್ಭಗಳಲ್ಲಿ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅರಣ್ಯ ಪ್ರದೇಶಗಳಲ್ಲಿ ಬಿಳಿ ಬಟ್ಟೆ ಧರಿಸಿ ಒಂಟಿಯಾಗಿ ಓಡಾಡಬಾರದು ಹಾಗೂ ರಾತ್ರಿ ವೇಳೆಯಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.






