Kanakagiri | ದಲಿತ ಮುಖಂಡ ಭೂಮಾನಂದ ಹತ್ಯೆ ಖಂಡನೆ : ತಕ್ಷಣ ನ್ಯಾಯ ಒದಗಿಸುವಂತೆ ಒತ್ತಾಯ

ಕನಕಗಿರಿ: ರಾಯಚೂರು ಜಿಲ್ಲೆಯ ದಲಿತ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಭೂಮಾನಂದ ಅವರ ಹತ್ಯೆಯನ್ನು ಖಂಡಿಸಿ ತಾಲೂಕು ಮಾದಿಗ ಮಹಾಸಭಾ ವತಿಯಿಂದ ಗುರುವಾರ ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಾದಿಗ ಮಹಾಸಭಾ ತಾಲೂಕು ಸಂಚಾಲಕ ನಿಂಗಪ್ಪ ಪೂಜಾರ, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ದಲಿತರು ಹಾಗೂ ಸಾಮಾಜಿಕ ಹೋರಾಟಗಾರರ ರಕ್ಷಣೆಗಾಗಿ ಸರ್ಕಾರ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ಮೃತ ಭೂಮಾನಂದ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, 10 ಎಕರೆ ಜಮೀನು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದ ಮೂಲಕ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಂಘಟನೆ ಮನವಿ ಮಾಡಿತು.
ಪ.ಪಂ ಸದಸ್ಯ ಹನುಮಂತ ಬಸರಿಗಿಡದ, ಎಸ್ಎಫ್ಐ ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೇ, ದಲಿತ ಮುಖಂಡ ಕನಕಪ್ಪ ಮ್ಯಾಗಡೇ, ನೀಲಕಂಠ ಬಡಿಗೇರ್, ಹನುಮೇಶ ಭಜಂತ್ರಿ,ಹುಲಗಪ್ಪ, ಶರಣಪ್ಪ, ತಿಮ್ಮಣ್ಣ, ಮಂಜುನಾಥ, ಯಮನೂರು, ಕಂಠಿ ಮ್ಯಾಗಡೇ ಸೇರಿದಂತೆ ಇತರರು ಇದ್ದರು.




