Kanakagiri | ‘ಬಸವ ಮಂಟಪ’ ಕೃತಿ ವಿವಾದ : ಕಠಿಣ ಕ್ರಮಕ್ಕೆ ಆಗ್ರಹ

ಕನಕಗಿರಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಶರಣ ಸಂಕುಲದ ಕುರಿತು ಅವಹೇಳನಕಾರಿಯಾಗಿ ಬರೆಯಲಾಗಿದೆ ಎನ್ನಲಾದ ಲೇಖಕ ರವಿ ಹಂಚ್ ಅವರ ‘ಬಸವ ಮಂಟಪ’ ಕೃತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಹಾಗೂ ಜಾಂಭವ ಯುವ ಸೇನೆಯ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವ ಮೂಲಕ ಶರಣ ಸಂಕುಲದ ನಾಯಕರನ್ನು ಅವಹೇಳನ ಮಾಡಲಾಗಿದೆ. ಇದು ಜಗತ್ತಿನ ಮನುಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ವಿವಾದಕ್ಕೆ ಕಾರಣವಾಗಿರುವ ‘ಬಸವ ಮಂಟಪ’ ಕೃತಿಯ ಪ್ರಸಾರವನ್ನು ತಕ್ಷಣ ನಿಲ್ಲಿಸಬೇಕು. ಲೇಖಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ದಲಿತ ಮುಖಂಡರಾದ ಪಾಮಣ್ಣ ಅರಳಿಗನೂರು, ನಿಂಗಪ್ಪ ಪೂಜಾರ ಹಾಗೂ ಶೇಷಪ್ಪ ಪೂಜಾರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಣ್ಣ ಹನುಮಂತ, ನಾಗೇಶ ಬಡಿಗೇರ್, ಕಂಠೇಪ್ಪ ಮ್ಯಾಗಡೇ, ಅಂಬ್ರೇಶ ಪಟ್ಟಣಶೇಟ್ಟಿ, ವೆಂಕಟೇಶ ನಿರ್ಲೂಟಿ, ಕನಕಪ್ಪ, ಉಮೇಶ ಮ್ಯಾಗಡೇ, ಹುಲುಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.






