Kanakagiri | ಬಣಜಿಗ ಸಮಾಜಕ್ಕೆ ಶಿಕ್ಷಣ, ಉದ್ಯೋಗದಲ್ಲಿ 2ಎ ಮೀಸಲಾತಿಗೆ ಆಗ್ರಹ

ಕನಕಗಿರಿ: ಶೈಕ್ಷಣಿಕವಾಗಿ ಹಿಂದುಳಿದಿರುವ ಬಣಜಿಗ ಸಮಾಜದವರಿಗೆ ಶಿಕ್ಷಣ ಹಾಗೂ ಉದ್ಯೋಗ ಎರಡರಲ್ಲೂ 2ಎ (ಗ್ರೂಪ್-ಬಿ) ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಬಣಜಿಗ ಸಮುದಾಯದ ಸುಮಿತ್ರಾ ಅವರು ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಮೂರ್ತಿ ಸುರಜ್ ಗೋವಿಂದರಾಜ ಅವರ ಏಕಸದಸ್ಯ ಪೀಠವು ಬಣಜಿಗ ಸಮಾಜವನ್ನು ಶಿಕ್ಷಣದಲ್ಲಿ ಗ್ರೂಪ್-ಬಿ ಹಾಗೂ ಉದ್ಯೋಗದಲ್ಲಿ ಗ್ರೂಪ್-ಡಿ ಎಂದು ವರ್ಗೀಕರಿಸಿರುವುದು ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು.
ಬಣಜಿಗ ಸಮಾಜ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಇನ್ನೂ ಹಿಂದುಳಿದಿದೆ. ಪ್ರಸ್ತುತ ಶಿಕ್ಷಣದಲ್ಲಿ 2ಎ (ಗ್ರೂಪ್-ಬಿ) ಹಾಗೂ ಉದ್ಯೋಗದಲ್ಲಿ 3ಎ (ಗ್ರೂಪ್-ಡಿ) ಮೀಸಲಾತಿ ಇರುವುದರಿಂದ ಶಿಕ್ಷಣ ಪಡೆದ ಅನೇಕ ಯುವಕರಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ ಎಂದು ಅವರು ತಿಳಿಸಿದರು.
ಹೀಗಾಗಿ ಬಣಜಿಗ ಸಮಾಜದ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಎರಡರಲ್ಲೂ 2ಎ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಪ್ರಭುಶೆಟ್ಟರ್, ಮಾಜಿ ಅಧ್ಯಕ್ಷ ಶರಣಬಸಪ್ಪ ಭತ್ತದ, ಪಟ್ಟಣ ಪಂಚಾಯತ್ ಸದಸ್ಯ ಸುರೇಶ ಗುಗ್ಗಳಶೆಟ್ಟಿ, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶರಣಬಸಪ್ಪ ಎಂ, ಭತ್ತದ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚೋಳಿನ್, ಸಮಾಜದ ತಾಲ್ಲೂಕು ಕಾರ್ಯದರ್ಶಿ ಸಂತೋಷ ಹಾದಿಮನಿ, ಗ್ರಾಪಂ ಮಾಜಿ ಸದಸ್ಯ ಶಿವಕುಮಾರ ಕೋರಿ, ವೀರೇಶ ಕೋರಿ, ವೀರೇಶ ಬಳಿಗಾರ, ರಾಚಪ್ಪ ಪ್ರಭುಶೆಟ್ಟರ್ ಇದ್ದರು. ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.






