Kanakagiri | ಆಲಮಟ್ಟಿ ಡ್ಯಾಂನಿಂದ ಬರಿದಾದ ಕೆರೆಗಳಿಗೆ ನೀರು ತುಂಬಿಸಿ: ಸರ್ಕಾರಕ್ಕೆ ರೈತ ಸಂಘ ಆಗ್ರಹ

ಕನಕಗಿರಿ: ಜಿಲ್ಲೆಯಾದ್ಯಂತ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಆಲಮಟ್ಟಿ ಜಲಾಶಯದಿಂದ ಕೊಪ್ಪಳ ಜಿಲ್ಲೆಯ ಬರಿದಾದ ಕೆರೆಗಳಿಗೆ ತಕ್ಷಣ ನೀರು ತುಂಬಿಸಬೇಕು ಎಂದು ಕರ್ನಾಟಕ ರೈತ ಸಂಘದ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಅಕ್ಕಸಾಲಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಆದರೆ ಕುಷ್ಟಗಿ, ಯಲಬುರ್ಗಾ, ಕುಕನೂರು ಹಾಗೂ ಕನಕಗಿರಿ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಲೈನ್ ವ್ಯವಸ್ಥೆ ಸಿದ್ಧವಾಗಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸಕ್ತ ವರ್ಷ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಕೆರೆ, ಹಳ್ಳ ಹಾಗೂ ಕೊಳ್ಳಗಳು ಬರಿದಾಗಿವೆ. ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗುತ್ತಿದೆ ಎಂದು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಆಲಮಟ್ಟಿ ಜಲಾಶಯದಿಂದ ಕೆರೆ ತುಂಬಿಸುವ ಯೋಜನೆಯಡಿ ತಕ್ಷಣ ನೀರು ಬಿಡುಗಡೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಆಗಸ್ಟ್ 15ರೊಳಗೆ ರೈತರ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ರೈತರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸೇರಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಅಗತ್ಯವಿದ್ದರೆ ಕನಕಗಿರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪಂಪಣ್ಣ ನಾಯಕ ಅಕ್ಕಸಾಲಿ ಎಚ್ಚರಿಕೆ ನೀಡಿದ್ದಾರೆ.






