ಕನಕಗಿರಿ | ಬಂಗಾರದ ಆಮಿಷವೊಡ್ಡಿ ವಂಚನೆ: ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಕನಕಗಿರಿ : ಬಂಗಾರದ ನಿಧಿ ಸಿಕ್ಕಿದೆ ಎಂಬ ಆಮಿಷಕ್ಕೆ ಬಲಿಯಾಗಿ ವ್ಯಕ್ತಿಯೊಬ್ಬ ತನ್ನ ಒಂದು ಎಕರೆ ಹೊಲ ಹಾಗೂ ಒಂದು ನಿವೇಶನ ಮಾರಾಟದಿಂದ ಬಂದ ಹಣವನ್ನು ನೀಡಿ ವಂಚನೆಗೆ ಒಳಗಾದ ಘಟನೆ ಸಮೀಪದ ವಿಠಲಾಪುರ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಮೋಚಿಗೇರ ಓಣಿಯ ರವಿ ಬಂಗಾಳಿಮರದ ಎಂಬುವರಿಗೆ, ಗಂಗಾವತಿಯ ಸುರೇಶ ಯಲ್ಲಪ್ಪ ಕನಕಗಿರಿ ಎಂಬವರ ಮೂಲಕ ವಿಠಲಾಪುರ ಗ್ರಾಮದ ಐದು ಜನರೊಂದಿಗೆ ಕಳೆದ 3–4 ವರ್ಷಗಳಿಂದ ಪರಿಚಯವಾಗಿದ್ದರು.
ಸುಮಾರು ಎರಡು ವರ್ಷಗಳ ಹಿಂದೆ ಆರೋಪಿತರು ರವಿ ಅವರ ಮನೆಗೆ ಬಂದು, “ನಮ್ಮ ಮನೆಯಲ್ಲಿ ಬಂಗಾರದ ನಿಧಿ ಸಿಕ್ಕಿದೆ” ಎಂದು ಹೇಳಿ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಬಂಗಾರದ ನಾಣ್ಯಗಳನ್ನು ತೋರಿಸಿದ್ದರು. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಹೇಳಿದ್ದರು.
ಕಡಿಮೆ ಬೆಲೆಗೆ ಬಂಗಾರ ಸಿಗುತ್ತದೆ ಎಂಬ ನಂಬಿಕೆಯಿಂದ ಬಂಗಾರದ ಆಮಿಷಕ್ಕೆ ಬಲಿಯಾದ ರವಿ ಅವರು, ತಮ್ಮ ಒಂದು ಎಕರೆ ಹೊಲ ಮತ್ತು ಒಂದು ನಿವೇಶನ ಮಾರಾಟದಿಂದ ಬಂದ ಒಟ್ಟು 48 ಲಕ್ಷ ರೂ. ಹಣವನ್ನು ಅಳಿಯ ರಮೇಶನ ಮೂಲಕ ನಗದು ಹಾಗೂ ಫೋನ್‌ಪೇ ಮೂಲಕ ಲೋಕೇಶನಿಗೆ ನೀಡಿದ್ದಾರೆ.
ಆರೋಪಿತರು ಹಣ ಪಡೆದ ನಂತರ, ಈ ಬಟ್ಟೆ ಗಂಟಿನೊಳಗೆ ಬಂಗಾರ ಇದೆ. 21 ದಿನಗಳ ಕಾಲ ಪೂಜೆ ಮಾಡಿ ನಂತರ ಮಾತ್ರ ಗಂಟು ತೆಗೆಯಬೇಕು. ಇಲ್ಲದಿದ್ದರೆ ಬಂಗಾರ ಬೂದಿಯಾಗುತ್ತದೆ ಎಂದು ಸೂಚಿಸಿದ್ದರು.
21 ದಿನಗಳ ಬಳಿಕ ಗಂಟು ತೆರೆದು ನೋಡಿದಾಗ, ಅದರೊಳಗೆ ಖೊಟ್ಟಿ ನಾಣ್ಯಗಳು ಹಾಗೂ ಕಲ್ಲುಗಳು ಮಾತ್ರ ಇರುವುದು ಕಂಡು ಬಂದಿದ್ದು, ಇದರಿಂದ ತಮಗೆ ಮೋಸವಾಗಿರುವುದು ದೃಢಪಟ್ಟಿದೆ.
ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಗ, ಆರೋಪಿತರು ಹಣದ ಭದ್ರತೆಗಾಗಿ ಶಾಂತಮ್ಮ ಅವರ ಹೆಸರಿನಲ್ಲಿರುವ ಎರಡು ಎಕರೆ ಹೊಲ ಹಾಗೂ 25 ಲಕ್ಷ ರೂ. ನಗದು ನೀಡಿ, ಉಳಿದ 23 ಲಕ್ಷ ರೂ. ಕೊಡಿ ಅಂತಾ ಕೇಳಿದರೆ ಜಾತಿ ನಿಂದನೆ ಮಾಡಿ ರಮೇಶ ಕಳ್ಳಿಮನಿ ಹಾಗೂ ರಮೇಶ ಹುಲ್ಲೂರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ವಿಠಲಾಪುರ ಗ್ರಾಮದ ಶಂಕರಗೌಡ ಆದಾಪುರ, ಶಾಂತಮ್ಮ ಆದಾಪುರ, ಹನುಮಂತಗೌಡ, ಸಣ್ಣ ವಿರೂಪಾಕ್ಷಗೌಡ ಹಾಗೂ ದೊಡ್ಡ ವಿರೂಪಾಕ್ಷಗೌಡ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







