ಕನಕಗಿರಿ | ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು : ಹಝರತ್ ಹುಸೇನ್

ಕನಕಗಿರಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ಆಗಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಝರತ್ ಹುಸೇನ್ ಅಧಿಕಾರಿಗಳಿಗೆ ತಿಳಿಸಿದರು.
ಅವರು ತಾಲೂಕಿನ ಹುಲಿಹೈದರ್ ಗ್ರಾ.ಪಂ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದರಿ ಯೋಜನೆಗಳಿಂದ ಆಗಿರುವ ಪ್ರಗತಿ ಹಾಗೂ ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳು ಸರ್ಕಾರದ 5 ಯೋಜನೆಗಳಿಂದ ಹೊರಗುಳಿಯಬಾರದೆಂಬ ಸದುದ್ದೇಶದಿಂದ ಅನುಷ್ಟಾನ ಸಮಿತಿಯ ʼನಡೆ ಗ್ರಾಮ ಪಂಚಾಯತಿ ಕಡೆʼ ಎಂಬ ಧ್ಯೇಯ ವ್ಯಾಖ್ಯಾನದಿಂದ ಕೂಡಿದ್ದು, ಸದರಿ ಯೋಜನೆಗಳ ಸಫಲತೆಯ ಬಗ್ಗೆ ಮಾತನಾಡಿ ಫಲಾನುಭವಿಗಳ ಜೊತೆ ಚರ್ಚಿಸಿದರು.
ಅನ್ನಭಾಗ್ಯ ಯೋಜನೆಯಡಿ ವಿವಿಧ ಕಾರ್ಯಕ್ರಮದಡಿಯಲ್ಲಿ 75 ವರ್ಷ ಮೇಲ್ಪಟ್ಟ ನಿಸ್ಸಹಾಯಕ ಒಂಟಿ ಕುಟುಂಬಗಳಿಗೆ ಪಡಿತರವನ್ನು ಸಮಯಕ್ಕೆ ಸರಿಯಾಗಿ ಹಂಚಿಕೆ ಮಾಡುವಂತೆ ಹಾಗೂ ನ್ಯಾಯಬೆಲೆ ಅಂಗಡಿಯ ಮಾರಾಟಗಾರರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗೃಹ ಲಕ್ಷ್ಮೀ ಯೋಜನೆಯಡಿ ಕರಡೋಣಾ, ಹುಲಿಹೈದರ್, ಹಿರೇಖೇಡಾ ಗ್ರಾ.ಪಂ ವ್ಯಾಪ್ತಿಯಲ್ಲಿ ಸದರಿ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸದರಿ ಯೋಜನೆಯ ವ್ಯಾಪ್ತಿಗೆ ಅವರನ್ನು ತಂದು ಶೇ.100 ರಷ್ಟು ಸಾಧನೆಯನ್ನು ಸಾಧಿಸಲು ಸೂಚಿಸಿದರು.
ಈ ವೇಳೆ ತಾಲೂಕು ಪಂಚಾಯತ್ ಯೋಜನಾಧಿಕಾರಿ ಡಾ.ಹುಲುಗಪ್ಪ, ಹುಲಿಹೈದರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶರಣಮ್ಮ ಕೆಲ್ಲೂರ್, ಉಪಾಧ್ಯಕ್ಷ ಜಗದೀಶ್ ಗದ್ದಿ, ಕರಡೋಣ ಗ್ರಾಮ ಪಂಚಾಯತ್ ಅಧ್ಯಕ್ಷ ಹಿರೇ ಹನುಮಂತಪ್ಪ, ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜಗದೀಶ್ ರಾಥೋಡ್, ನೀಲಕಂಠ ಬಡಿಗೇರ್, ಜಗದೀಶ್ ಚನ್ನವೀರಪ್ಪ, ಕರಿಯಪ್ಪ ನಾಯಕ್, ಹನುಮಮ್ಮ ಪಾಟೀಲ್, ಗ್ಯಾನಪ್ಪ, ಭೀಮೇಶ್, ವಿರೇಶ್ ಮತ್ತು ಗ್ಯಾರಂಟಿ ಯೋಜನೆಗಳ ವಿವಿಧ ಇಲಾಖೆಯ ಅಧಿಕಾರಿಗಳು, ಹುಲಿಹೈದರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ನಾಯಕ್, ಕರಡೋಣ ಮತ್ತು ಹಿರೇಖೇಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಮಲ್ಲಿಕಾರ್ಜುನ, ತಾಲೂಕ ಪಂಚಾಯತ್ ವಿಷಯ ನಿರ್ವಾಹಕರಾದ ಕೊಟ್ರಯ್ಯ ಸ್ವಾಮಿ, ಕೆ.ಪವನಕುಮಾರ್ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.







