Kanakagiri | ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ, ಪಿಂಚಣಿ ಜಾರಿಯಾಗಲಿ: ಮಂಟನಗೌಡ ನಾಡಗೌಡ

ಕನಕಗಿರಿ: ಅಕ್ಷರ ದಾಸೋಹ ನೌಕರರು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸ್ಕೀಮ್ ಕಾರ್ಮಿಕರಾಗಿ ಗೌರವಧನದ ಆಧಾರದಲ್ಲಿ ದುಡಿಯುತ್ತಿದ್ದು, ಇಂದಿನ ದುಬಾರಿ ಜೀವನಕ್ಕೆ ತಕ್ಕ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಮಂಟನಗೌಡ ನಾಡಗೌಡ ಹೇಳಿದರು.
ಪಟ್ಟಣದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಐಟಿಯು ಆಯೋಜಿಸಿದ್ದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಪ್ರಥಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ದಾಸೋಹ ನೌಕರರು ಹಲವು ವರ್ಷಗಳಿಂದ ಕನಿಷ್ಠ ವೇತನ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹಲವು ಹಂತದ ಹೋರಾಟಗಳನ್ನು ನಡೆಸಿದರೂ ನಿರೀಕ್ಷಿತ ನ್ಯಾಯ ದೊರೆತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೌಕರರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ಅವರು ದೂರಿದರು.
ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ವಿವಿಧ ಕಾರ್ಮಿಕರಿಗೆ ದೊರೆಯುವ ವೇತನಕ್ಕೆ ಹೋಲಿಸಿದರೆ ಅಕ್ಷರ ದಾಸೋಹ ನೌಕರರಿಗೆ ನೀಡಲಾಗುತ್ತಿರುವ ಗೌರವಧನ ಅತ್ಯಂತ ಕಡಿಮೆಯಾಗಿದೆ ಎಂದು ತಿಳಿಸಿದರು.
ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಮತ್ತು ಪಿಂಚಣಿ ಯೋಜನೆ ಜಾರಿಯಾಗಬೇಕು. ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವ ರೀತಿಯಲ್ಲಿ ಸಂಘಟಿತ ಹಾಗೂ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು. ನೌಕರರು ಗಟ್ಟಿ ಮನಸ್ಸು ಮಾಡಿಕೊಂಡು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಶಾಸಕರು ಹಾಗೂ ಸಚಿವರಿಗೆ ದೊರೆಯುವ ವೇತನ, ಭತ್ಯೆ ಮತ್ತು ಪಿಂಚಣಿ ವ್ಯವಸ್ಥೆಯನ್ನು ಉಲ್ಲೇಖಿಸಿದ ಅವರು, ಮಕ್ಕಳಿಗೆ ಬಿಸಿಯೂಟ ನೀಡುವಂತಹ ಮಹತ್ವದ ಕೆಲಸ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ನೌಕರರಿಗೂ ಗೌರವಯುತ ವೇತನ ಹಾಗೂ ಸಾಮಾಜಿಕ ಭದ್ರತೆ ದೊರೆಯಬೇಕು ಎಂದು ಪ್ರತಿಪಾದಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಅಕ್ಷರ ದಾಸೋಹ ಮತ್ತು ಬಿಸಿಯೂಟ ನೌಕರರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳು ಮತ್ತು ಬೇಡಿಕೆಗಳ ಕುರಿತು ಜಾಗೃತರಾಗಬೇಕು ಹಾಗೂ ಮುಂದಿನ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೀ ಸೋನಾರ ಅಧ್ಯಕ್ಷತೆ ವಹಿಸಿದ್ದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಡಗ್ಗಿ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಈರಮ್ಮ, ಕಾರ್ಯದರ್ಶಿ ನೂರಜಾನ್, ಸಿಐಟಿಯು ಸಂಚಾಲಕ ಮಲ್ಲಪ್ಪ ಮ್ಯಾಗಡೆ, ಪರಶುರಾಮ ಹಾಗೂ ಕರ್ನಾಟಕ ರಾಜ್ಯ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಉಪಸ್ಥಿತರಿದ್ದರು.






