Kanakagiri | ಆದಾಪುರ ಸರಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ

ಕನಕಗಿರಿ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ ಸಂಗಪ್ಪ ತಂಗಡಗಿ ಅವರು ತಾಲ್ಲೂಕಿನ ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಗ್ರಾಮದಲ್ಲಿ ಈಗಾಗಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಬಿಸಿಯೂಟ ಕೊಠಡಿ, ಶಾಲಾ ಕಚೇರಿ ಸೇರಿ ಒಟ್ಟು 7 ಕೊಠಡಿಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದ್ದರೂ, ಶಾಲಾ ಜಾಗದ ಕೊರತೆ ಮತ್ತು ವಿವಾದ ಅಡ್ಡಿಯಾಗಿತ್ತು.
ಈ ಹಿನ್ನೆಲೆ 2023ರ ವಿಧಾನಸಭಾ ಚುನಾವಣೆಯ ವೇಳೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ನೀಡಿದ್ದರು. ಆಗ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶಿವರಾಜ ತಂಗಡಗಿ ಅವರು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಶಾಲೆಗೆ ಒಂದು ಎಕರೆ ಜಾಗ ದಾನ ಮಾಡುವುದಾಗಿ ಭರವಸೆ ನೀಡಿದ್ದರು.
ಭರವಸೆಯಂತೆ, ತಂಗಡಗಿ ಅವರ ತಾಯಿ ಹುಲಿಗೆಮ್ಮ ಸಂಗಪ್ಪ ಅವರು ಸ್ಥಳೀಯರಿಂದ ಒಂದು ಎಕರೆ ಭೂಮಿಯನ್ನು ಖರೀದಿಸಿ ಅದನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ. ರೈಸ್ ಟೆಕ್ನಾಲಜಿ ಪಾರ್ಕ್ ಯೋಜನೆಯಿಂದ ಈ ಭಾಗದಲ್ಲಿ ಭೂಮಿಯ ದರ ಹೆಚ್ಚಿರುವ ಸಂದರ್ಭದಲ್ಲಿ ಕೂಡಾ ಶಾಲೆಯ ಹಿತಕ್ಕಾಗಿ ಜಾಗ ದಾನ ಮಾಡಿರುವುದನ್ನು ಗ್ರಾಮಸ್ಥರು ಮೆಚ್ಚಿಕೊಂಡಿದ್ದಾರೆ.
ಶನಿವಾರ ಕಾರಟಗಿಯ ಉಪನೋಂದಣಿ ಕಚೇರಿಯಲ್ಲಿ 80 ವರ್ಷ ವಯಸ್ಸಿನ ಹುಲಿಗೆಮ್ಮ ಸಂಗಪ್ಪ ತಂಗಡಗಿ ಅವರು ದಾನಪತ್ರವನ್ನು ರಾಜ್ಯಪಾಲರ ಹೆಸರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನೋಂದಣಿ ಮಾಡಿಸಿದರು.
ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಬಿ.ಎಚ್, ಸರ್ಕಾರಿ ಭೂಮಿ ಇಲ್ಲದ ಊರಲ್ಲಿ ಖಾಸಗಿ ವ್ಯಕ್ತಿಯಿಂದ ಜಾಗ ಖರೀದಿಸಿ ಶಾಲೆಗೆ ದಾನವಾಗಿ ನೀಡಿರುವುದು ಅತ್ಯಂತ ಮಾದರಿಯ ನಡೆ. ಈ ಭಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ಶ್ಲಾಘನೀಯ ಎಂದು ಹೇಳಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 5 ಶಾಲಾ ಕೊಠಡಿಗಳು ಹಾಗೂ ರಾಜ್ಯ ವಲಯದಿಂದ ಒಂದು ಕೊಠಡಿ ಮಂಜೂರು ಮಾಡಿಸಿರುವುದಕ್ಕೆ ಸಚಿವ ಶಿವರಾಜ ತಂಗಡಗಿ ಅವರಿಗೆ ಶಿಕ್ಷಣ ಇಲಾಖೆ ಅಭಿನಂದನೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಇನಾಯತ್, ಶಿಕ್ಷಣ ಸಂಯೋಜಕರು ರಾಘವೇಂದ್ರ, ಶಶಿಧರಸ್ವಾಮಿ, ಪ್ರಭಾರ ಸಿಆರ್‌ಪಿ ರಾಜಕುಮಾರ, ಕಾರಟಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಮುಖ್ಯ ಶಿಕ್ಷಕರು ನರಹರಿ, ರಮೇಶ್ ಕುಕನೂರು, ಶಾಮಸುಂದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.







