Kanakagiri | ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಉತ್ತಮ ನಿರ್ಧಾರ : ರಂಭಾಪುರಿ ಶ್ರೀ

ಕನಕಗಿರಿ: ಗ್ಯಾರಂಟಿ ಯೋಜನೆಗಳು ಚುನಾವಣೆಗೆ ಮುನ್ನ ಜನರ ಗಮನ ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತಂದುಕೊಟ್ಟಿದ್ದರೂ, ಅವುಗಳ ಅನುಷ್ಠಾನದಿಂದ ರಾಜ್ಯದ ಖಜಾನೆಯ ಮೇಲೆ ಭಾರೀ ಹೊರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಕನಕಗಿರಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ವಿವಿಧ ಮೂಲಗಳಿಂದ ತೆರಿಗೆ ಹೆಚ್ಚಿಸಲಾಗಿದ್ದು, ಇದರಿಂದ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ ಎಂದು ಹೇಳಿದರು.
ಯೋಜನೆಗಳಿಂದ ಕೆಲವರಿಗೆ ಪ್ರಯೋಜನವಾಗಿದ್ದರೂ, ಅನರ್ಹರು ಕೂಡ ಸೌಲಭ್ಯ ಪಡೆಯುತ್ತಿರುವುದು ಹಾಗೂ ಮೃತ ವ್ಯಕ್ತಿಗಳ ಹೆಸರಿನಲ್ಲೂ ಹಣ ಪಾವತಿಯಾಗುತ್ತಿರುವಂತಹ ಪ್ರಕರಣಗಳಿಂದ ಸರ್ಕಾರದ ಹಣ ವ್ಯರ್ಥವಾಗುತ್ತಿದೆ ಎಂದು ಅವರು ಹೇಳಿದರು.
ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳ ಲಾಭ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದು ಒಳಿತು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಈ ಸಂದರ್ಭದಲ್ಲಿ ಜಾತಿ-ಧರ್ಮಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಸಮುದಾಯಗಳ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸ ಇದೆ ಎಂದು ಜಗದ್ಗುರುಗಳು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ,ಪ.ಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗ ನಾಯಕ, ಚನಬಸಯ್ಯ ಹಿರೇಮಠ, ಶರಣಪ್ಪ ಸಜ್ಜನ್, ಮಹಾಂತೇಶ ಸಜ್ಜನ್, ಸಂಗಪ್ಪ ಸಜ್ಜನ, ಚೆನ್ನಪ್ಪ ತೆಗ್ಗಿನಮನಿ, ವಾಗೇಶ ಹೀರೆಮಠ, ಡಾ. ಗುರುಮೂರ್ತಿ, ಬಸವರಾಜ ಸಜ್ಜನ, ಹನುಮೇಶ ವಾಲೇಕಾರ್,ರಾಜೇಶ ಸೇರಿದಂತೆ ಇತರರು ಇದ್ದರು.






