ಕನಕಗಿರಿ | ಸರಕಾರಿ ಶಾಲೆ, ಪಿಯು ಕಾಲೇಜುಗಳ ವಿಲೀನದ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ

ಕನಕಗಿರಿ : 700 ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಪಂಚಾಯತಿಯಲ್ಲಿ ಬರುವ ಸುತ್ತಮುತ್ತಲಿನ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ 5,000 ಕ್ಕೂ ಹೆಚ್ಚು ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಎಸ್.ಎಫ್.ಐ ಸೋಮವಾರ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.
ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಸುಮಾರು 47,493 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿಪೂರ್ವ ಕಾಲೇಜುಗಳಿದೆ. 309 ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು 2015-16ರಲ್ಲಿ 47.1 ಲಕ್ಷದಿಂದ 2025-26ರಲ್ಲಿ 38.2 ಲಕ್ಷಕ್ಕೆ (19% ಕಡಿಮೆ) ಕುಸಿದಿದೆ.
ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು ಶೇ.46 ರಿಂದ ಶೇ.38ಕ್ಕೆ ಕುಸಿದಿರುತ್ತದೆ. ಆದರೆ ಖಾಸಗಿ ಅನುದಾನರಹಿತ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26ರಲ್ಲಿ 47 ಲಕ್ಷ ವಿದ್ಯಾರ್ಥಿಗಳಿಗೆ (29%) ಹೆಚ್ಚಾಗಿದೆ. 25-10-2021 ರ ಸುತ್ತೋಲೆ ಪ್ರಕಾರ CSR ನಿಧಿಯಲ್ಲಿ ಪ್ರಾರಂಭವಾಗುವ ಹೊಸ KPS ಶಾಲೆಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸಂಪೂರ್ಣ ವೆಚ್ಚವನ್ನು ದಾನಿಗಳು / ಸಂಸ್ಥೆಗಳು ಬರಿಸಬೇಕು ಹಾಗೂ ಅಗತ್ಯ ಮೂಲಭೂತ ಸೌಕರ್ಯ ಮತ್ತು ಅತಿಥಿ ಶಿಕ್ಷಕರು ಮತ್ತು ಆಯಾಗಳನ್ನು ನೇಮಕ ಮಾಡಿಕೊಂಡು 2 ವರ್ಷಗಳ ಅವಧಿಗೆ ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲು ಸಿದ್ಧರಿರಬೇಕು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೆ ಮಾತನಾಡಿದರು. ನಂತರ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರಗತಿಪರ ತಾಲೂಕು ಅಧ್ಯಕ್ಷ ಪಾಮಣ್ಣ ಅರಳಿಗನೂರು, ಬಸಯ್ಯ ಹಿರೇಮಠ, ರೈತ ಮುಖಂಡ ಮರಿಯಪ್ಪ ಸಾಲೋಣಿ, ತಾಲೂಕು ಉಪಾಧ್ಯಕ್ಷ ಮಾರುತಿ, ಸೇರಿದಂತೆ ಇತರರು ಇದ್ದರು.







