Kanakagiri | ನಾಡಕಚೇರಿಯಲ್ಲಿ ಸಿಬ್ಬಂದಿ ಗೈರು : ಆಧಾರ್ ಸೇವೆಗೆ ಬಂದ ಸಾರ್ವಜನಿಕರ ಪರದಾಟ

ಕನಕಗಿರಿ: ತಾಲೂಕಿನ ಕಲಕೇರಿ ರಸ್ತೆಯಲ್ಲಿರುವ ನಾಡಕಚೇರಿಗೆ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆ ಹಾಗೂ ವಿವಿಧ ತಿದ್ದುಪಡಿ ಕಾರ್ಯಗಳಿಗಾಗಿ ಬಂದಿದ್ದ ಸಾರ್ವಜನಿಕರು ಸಿಬ್ಬಂದಿ ಗೈರಾಗಿದ್ದರಿಂದ ಗಂಟೆಗಟ್ಟಲೆ ಕಾಯುವಂತಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಸರಿಹಾಳ, ಬಂಕಾಪುರ, ತಿಪ್ಪನಾಳ, ನಿರಲೂಟಿ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾರ್ವಜನಿಕರು ಬೆಳಿಗ್ಗೆ 6 ಗಂಟೆಯಿಂದಲೇ ನಾಡಕಚೇರಿ ಎದುರು ಆಗಮಿಸಿ ಕಾದು ಕುಳಿತಿದ್ದರು. ಆದರೆ ಬೆಳಿಗ್ಗೆ 10 ಗಂಟೆಯಾದರೂ ಸಿಬ್ಬಂದಿ ಹಾಜರಾಗದ ಹಿನ್ನೆಲೆಯಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಹಾಗೂ ದಿನಗೂಲಿ ಕೆಲಸ ಬಿಟ್ಟು ಬಂದಿದ್ದ ಕಾರ್ಮಿಕರು ಕಚೇರಿ ಮುಂದೆ ಕಾಯುತ್ತಿದ್ದು, ಸೇವೆ ದೊರೆಯದೇ ಪರದಾಡುವಂತಾಯಿತು.
ಸ್ಥಳೀಯ ನಿವಾಸಿ ರಮೇಶ್ ಉಡಿ ಮಾತನಾಡಿ, ಆಧಾರ್ ತಿದ್ದುಪಡಿ ಮತ್ತು ಮೊಬೈಲ್ ಸಂಖ್ಯೆ ಜೋಡಣೆಗಾಗಿ ದೂರದ ಊರುಗಳಿಂದ ಜನರು ಬರುತ್ತಾರೆ. ಆದರೆ ಸಿಬ್ಬಂದಿ ಸಮಯಕ್ಕೆ ಬರುವುದಿಲ್ಲ. ಟೋಕನ್ ಹಾಗೂ ಚೀಟಿ ವಿತರಣೆಯೂ ವಿಳಂಬವಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಕೂಲಿಕಾರರ ಉದ್ಯೋಗಕ್ಕೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ದಿನದ ಕೂಲಿ ಬಿಟ್ಟು ಬಂದರೆ ಇಡೀ ದಿನ ಕಚೇರಿಯಲ್ಲೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ನಾಡಕಚೇರಿಗೆ ಖಾಯಂ ಸಿಬ್ಬಂದಿಯನ್ನು ನೇಮಿಸಿ ಸೇವೆಯನ್ನು ಸುಗಮಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.






