Kanakagiri | ಎಸ್‌ಐಆರ್ ಕಾರ್ಯದಲ್ಲಿ ತಾಲೂಕು ಮುಂಚೂಣಿ : ತಹಶೀಲ್ದಾರ್ ಚಂದ್ರಶೇಖರ್ ಗಾಳಿ

ಕನಕಗಿರಿ: ಜಿಲ್ಲೆಯ ಎಸ್‌ಐಆರ್ ಕಾರ್ಯದಲ್ಲಿ ತಾಲೂಕು ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ತಹಶೀಲ್ದಾರ್ ಚಂದ್ರಶೇಖರ್ ಗಾಳಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 94 ಮತಗಟ್ಟೆಗಳಿದ್ದು, ಪಟ್ಟಣದಲ್ಲಿ 17 ಹಾಗೂ ಗ್ರಾಮೀಣ ಭಾಗದಲ್ಲಿ 77 ಮತಗಟ್ಟೆಗಳಿವೆ. ತಾಲೂಕಿನಲ್ಲಿ ಒಟ್ಟು 79,679 ನೋಂದಾಯಿತ ಮತದಾರರಿದ್ದಾರೆ ಎಂದರು.
ತಾಲೂಕಿನ ಎಲ್ಲ ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಶೇ.100ರಷ್ಟು ಅರ್ಜಿ ನಮೂನೆಗಳನ್ನು ವಿತರಿಸಿದ್ದಾರೆ. ಈ ಪೈಕಿ 72,504 ಮತದಾರರು ಅರ್ಜಿ ಸಲ್ಲಿಸಿದ್ದು, ಶೇ.91ರಷ್ಟು ಅರ್ಜಿಗಳು ಸ್ವೀಕೃತವಾಗಿವೆ. ಉಳಿದ ಶೇ.9ರಷ್ಟು ಅರ್ಜಿಗಳ ಪೈಕಿ 7,175 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.
ಕರಡು ಪಟ್ಟಿಯಿಂದ 133 ಮಂದಿ ಗೈರು, 3,856 ಮಂದಿ ಸ್ಥಳಾಂತರಗೊಂಡವರು, 1,464 ಮಂದಿ ಮೃತಪಟ್ಟವರು ಹಾಗೂ 1,722 ಮಂದಿ ನಕಲಿ ಅಥವಾ ಎರಡು ಕಡೆ ಮತದಾನ ಮಾಡಿರುವ ಪ್ರಕರಣಗಳಾಗಿ ಗುರುತಿಸಲಾಗಿದೆ. ಗೈರಾದವರು ಹಾಗೂ ಸ್ಥಳಾಂತರಗೊಂಡವರು ನಮೂನೆ-6 ಸಲ್ಲಿಸಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಆ.17 ಕೊನೆಯ ದಿನವಾಗಿದ್ದು, ಬಾಕಿ ಉಳಿದಿರುವ ಮತದಾರರು ತಮ್ಮ ಅರ್ಜಿಗಳನ್ನು ಸಂಬಂಧಪಟ್ಟ ಬಿಎಲ್‌ಒಗಳಿಗೆ ಕೂಡಲೇ ಸಲ್ಲಿಸಬೇಕು ಎಂದು ಹೇಳಿದರು.
ಎಸ್‌ಐಆರ್ ಕಾರ್ಯದಲ್ಲಿ ಶೇ.100ರಷ್ಟು ಗುರಿ ತಲುಪಲು ಬಾಕಿ ಇರುವ ಮತದಾರರಿಂದಲೂ ಅರ್ಜಿಗಳನ್ನು ಸ್ವೀಕರಿಸುವಂತೆ ಬಿಎಲ್‌ಒಗಳಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ವಿಷಯ ನಿರ್ವಹಕ ವಿಜಯಕುಮಾರ ಹಾಗೂ ಶಿರಸ್ತೇದಾರ ಸುನೀಲ್ ಉಪಸ್ಥಿತರಿದ್ದರು.






