Kanakagiri | ಹುಲಿಹೈದರ ಬಳಿ ಟಾಟಾ ಎಸಿ ಪಲ್ಟಿ : ಮಗು ಸೇರಿ 20 ಮಂದಿಗೆ ಗಾಯ

ಕನಕಗಿರಿ: ತಾಲೂಕಿನ ಹುಲಿಹೈದರ–ಕನಕಗಿರಿ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎರಡು ವರ್ಷದ ಹೆಣ್ಣು ಮಗು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ ಹುಲಿಹೈದರ ಗ್ರಾಮದಿಂದ ಕುಟುಂಬ ಸಮೇತ ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಮಧ್ಯಾಹ್ನ ಸುಮಾರು 1 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿಯಾಗಿದೆ.
ಅಪಘಾತದಲ್ಲಿ ವಾಹನದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ನಾಲ್ವರ ಗಾಯಗಳು ಗಂಭೀರವಾಗಿವೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ತಕ್ಷಣ ಗಂಗಾವತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕನಕಗಿರಿ ಪೊಲೀಸ್ ಠಾಣೆಯ ಪಿಐ ವಿ. ನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ.




