Kanakagiri | ಮಾಧ್ಯಮ ಕ್ಷೇತ್ರವು ಇಂದು ಉದ್ಯಮವಾಗಿ ಪರಿವರ್ತನೆಯಾಗುತ್ತಿದೆ : ಕೆ.ನಿಂಗಜ್ಜ
ಪತ್ರಿಕಾ ದಿನಾಚರಣೆ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ ಸಮಾರಂಭ

ಕನಕಗಿರಿ: ಸೇವೆಯ ಬದಲಾಗಿ ಮಾಧ್ಯಮ ಕ್ಷೇತ್ರವು ಇಂದು ಉದ್ಯಮವಾಗಿ ಪರಿವರ್ತನೆಯಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಹೇಳಿದರು.
ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಉಳಿವಿನಲ್ಲಿ ಪತ್ರಿಕೋದ್ಯಮದ ಪಾತ್ರ ಅಪಾರವಾಗಿದೆ. ಪತ್ರಿಕೆಗಳ ಬಗ್ಗೆ ಅರಿವಿಲ್ಲದವರೇ ಇಂದು ಪತ್ರಿಕೆಗಳ ಮಾಲೀಕರಾಗುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ದೊರೆಯಲು ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾತ್ರದಷ್ಟೇ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಪತ್ರಿಕಾ ಕ್ಷೇತ್ರದಲ್ಲಿಯೂ ಗುಂಪುಗಾರಿಕೆ ಹಾಗೂ ಜಾತೀಯತೆ ನುಸುಳಿರುವುದು ಆತಂಕಕಾರಿ. ಹಿರಿಯ ಪತ್ರಕರ್ತರಾದ ಖಾದ್ರಿ ಶಾಮಣ್ಣ ಮತ್ತು ಗುಂಡಪ್ಪ ಅವರ ಮಾರ್ಗದರ್ಶನವನ್ನು ಮಾದರಿಯಾಗಿಸಿಕೊಳ್ಳಬೇಕು. ಯಾವುದೇ ಪಕ್ಷದ ಪರವಾಗಿ ಸುದ್ದಿ ಪ್ರಕಟಿಸದೆ, ವಾಸ್ತವ ಸ್ಥಿತಿಯನ್ನು ಅರಿತು ನೈಜ ಸುದ್ದಿಗಳನ್ನು ಜನರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಇಂದಿಗೂ ಓದುಗರು ಪತ್ರಿಕೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರಯ್ಯಸ್ವಾಮಿ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡಿಲ್ಲ. ಶೀಘ್ರದಲ್ಲೇ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪತ್ರಕರ್ತ ಶರಣಬಸವ ಹುಲಿಹೈದರ, ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಪತ್ರಕರ್ತ ಮೆಹಬೂಬಸಾಬ್ ಗಂಗಾವತಿ ಮಾತನಾಡಿದರು.
ಉಪನ್ಯಾಸಕರಾದ ಶಿವಪುತ್ರಪ್ಪ ಗಳಪೂಜಿ ಹಾಗೂ ರೇಖಾ ಚಕ್ರಸಾಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಮೆಹಬೂಬಹುಸೇನ, ಪ್ರವೀಣಕುಮಾರ ಕೋರಿ, ಮಧುಸೂದನರೆಡ್ಡಿ ಹಾಗೂ ಮಹಾಂತೇಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಹನುಮೇಶ್ ಕಾರ್ಯಕ್ರಮ ನಿರೂಪಿಸಿದರು.






