Kanakagiri | ಪ್ರಜಾಪ್ರಭುತ್ವದ ಯಶಸ್ಸು ಯುವಜನರ ಜಾಗೃತಿಯಲ್ಲಿದೆ: ತಹಶೀಲ್ದಾರ್ ಚಂದ್ರಶೇಖರ ಗಾಳಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಸಂಸತ್ ಸ್ಪರ್ಧೆ

ಕನಕಗಿರಿ: ಪ್ರಜಾಪ್ರಭುತ್ವದ ಯಶಸ್ಸು ಯುವಜನರ ಜಾಗೃತಿ, ಸಂವಿಧಾನದ ಅರಿವು ಮತ್ತು ಮತದಾನದ ಮಹತ್ವವನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ ಎಂದು ತಹಶೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ-2026 ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 15ರಂದು ಆಚರಿಸಲಾಗುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ತಾಲೂಕಿನ ಎಲ್ಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ತಾ.ಪಂ. ಇಒ ಕೆ. ರಾಜಶೇಖರ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಡಾ. ಅರವಿಂದ ಲಂಬೂ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪನ್ಯಾಸಕ ಶಿವಪುತ್ರಪ್ಪ ಗಳಪೂಜಿ ವಿಶೇಷ ಉಪನ್ಯಾಸ ನೀಡಿದರು.
ಕಾಲೇಜು ಪ್ರಾಚಾರ್ಯ ಅಮರೇಶ ದೇವರಾಳ, ನಿಲಯಪಾಲಕ ಪಂಪಾನಗೌಡ, ಹುಸೇನಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಪಠಿಸಲಾಯಿತು.




