Kanakagiri | ಮೊರಾರ್ಜಿ ವಸತಿ ಶಾಲೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ಭೇಟಿ

ಕನಕಗಿರಿ : ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಅವರು ಶುಕ್ರವಾರ ಭೇಟಿ ನೀಡಿ, ಶಾಲೆಯ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.
ಈ ವೇಳೆ ಅಡುಗೆ ಕೋಣೆ, ಅಕ್ಕಿ ಗೋದಾಮು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆಟದ ಮೈದಾನವನ್ನು ಪರಿಶೀಲಿಸಿದ ಅವರು, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಅವಲೋಕಿಸಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಾಲಿನಲ್ಲಿ ಕುಳಿತು ಊಟ ಸವಿದ ತನುಶ್ರೀ, ಆಹಾರದ ರುಚಿ, ಗುಣಮಟ್ಟ ಹಾಗೂ ಪ್ರಮಾಣದ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದರು. ಅಕ್ಕಿ ಗೋದಾಮಿನಲ್ಲಿನ ಪಡಿತರ ದಾಸ್ತಾನು ಪರಿಶೀಲಿಸಿ, ಅಗತ್ಯ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶುದ್ಧ ಕುಡಿಯುವ ನೀರಿನ ಪೂರೈಕೆ ಮತ್ತು ಆಟದ ಮೈದಾನದ ಸ್ಥಿತಿಗತಿ ಕುರಿತು ಪ್ರಾಂಶುಪಾಲರೊಂದಿಗೆ ಚರ್ಚಿಸಿದ ಅವರು, ವಸತಿ ಶಾಲೆಯ ವಿದ್ಯಾರ್ಥಿಗಳು ನಮ್ಮ ಮಕ್ಕಳಿದ್ದಂತೆ. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸ್ವಚ್ಛತೆ, ಗುಣಮಟ್ಟದ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದ ಸೌಲಭ್ಯಗಳಿಂದ ಯಾವುದೇ ವಿದ್ಯಾರ್ಥಿ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶಾಲೆಯಲ್ಲಿನ ವಿವಿಧ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದು, ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಾಂಶುಪಾಲ ಸಿದ್ದಲಿಂಗಪ್ಪ ದೇಮಣ್ಣವರ್, ಶಿಕ್ಷಕಿಯರಾದ ರುಬೀಯಾ, ಗೀತಾಂಜಲಿ, ಸ್ವಾತಿ, ದೈಹಿಕ ಶಿಕ್ಷಕ ಸಿದ್ದಪ್ಪ, ಪ್ರಭಾರಿ ನಿಲಯ ಪಾಲಕ ರಮೇಶ ಬೂದಿಹಾಳ, ಪ್ರಥಮ ದರ್ಜೆ ಸಹಾಯಕ ಶಾಮಣ್ಣ ಗುರಿಕಾರ ಇತತರು ಇದ್ದರು.






